ನೀರವ್ ಮೋದಿ ಬಂಧನಕ್ಕೆ ಇಂಗ್ಲೆಂಡ್ ದಾಖಲೆ ಕೇಳಿತ್ತು, ಭಾರತ ಪ್ರತಿಕ್ರಿಯಿಸಿರಲಿಲ್ಲ !
ಎನ್ ಡಿಟಿವಿ ವರದಿ

ಹೊಸದಿಲ್ಲಿ, ಮಾ. 11: ದೇಶದಿಂದ ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿ ದುಬಾರಿ ಆಸ್ಟ್ರಿಚ್-ಗರಿಗಳ ಜಾಕೆಟ್ ಹಾಕಿಕೊಂಡು ಕಳೆದ ವಾರ ಲಂಡನ್ ಬೀದಿಯಲ್ಲಿ ತಿರುಗುತ್ತಿದ್ದ ಸಂದರ್ಭ ಭಾರತ ಸರಕಾರ, ನೀರವ್ ಮೋದಿಯನ್ನು ಗಡಿಪಾರು ಮಾಡಲು ವಿಚಾರಣೆ ನಡೆಸುವ ಪ್ರಯತ್ನ ಭಾರತದ ಭಾಗದಲ್ಲಿ ಯಾವುದೇ ವಿಳಂಬ ಆಗಲಾರದು ಎಂದು ಹೇಳಿದೆ. ಆದರೆ, ಈ ಎರಡೂ ಸನ್ನಿವೇಶ ವಿರೋಧಾಬಾಸದಂತೆ ಕಾಣುತ್ತಿದೆ. ಬ್ರಿಟಿಶ್ ಪ್ರಾಧಿಕಾರ ಮಾಹಿತಿಗಾಗಿ ಹಲವು ಪ್ರಶ್ನೆಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ, ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದಲ್ಲದೆ, ನೀರವ್ ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ನೆರವು ನೀಡಲು ಭಾರತಕ್ಕೆ ಆಗಮಿಸಬೇಕೇ ಎಂದು ಇಂಗ್ಲೆಂಡ್‌ನ ಕಾನೂನು ತಜ್ಞರ ತಂಡ ಭಾರತವನ್ನು ಕೇಳಿತ್ತು. ಆದರೆ, ಅದಕ್ಕೂ ಭಾರತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.
2018 ಫೆಬ್ರವರಿಯಲ್ಲಿ ಪರಸ್ಪರ ಕಾನೂನು ನೆರವು ಒಪ್ಪಂದ (ಎಂಎಲ್‌ಎಟಿ) ಅಡಿಯಲ್ಲಿ ಭಾರತ ಮೊದಲ ಬಾರಿಗೆ ಇಂಗ್ಲೆಂಡ್‌ಗೆ ನೀರವ್ ಮೋದಿ ಬಗ್ಗೆ ಮುನ್ನೆಚ್ಚರಿಕೆ ರವಾನಿಸಿತ್ತು. ಈ ಮುನ್ನೆಚ್ಚರಿಕೆ ರವಾನಿಸಿರುವುದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣದಲ್ಲಿ 13 ಸಾವಿರ ಕೋಟಿ ರೂ. ವಂಚಿಸಿದ ನೀರವ್ ಮೋದಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಸಿಬಿಐ ಕ್ರಿಮಿನಲ್ ಪ್ರಕರಣ ದಾಖಲಿಸಿದ ಬಳಿಕ ಎಂಬುದನ್ನು ಲಂಡನ್‌ನ ಗಂಭೀರ ವಂಚನೆ ಕಚೇರಿ (ಎಸ್‌ಎಫ್‌ಒ)ಯಿಂದ ಎನ್‌ಡಿಟಿವಿಗೆ ತಿಳಿದು ಬಂದಿತ್ತು. ವಿದೇಶದಲ್ಲಿರುವ ಅಪರಾಧಿಗಳನ್ನು ಬಂಧಿಸಲು ಈ ಹಿಂದಿನ ಕಾನೂನು ನೆರವು ಪ್ರಯಾಸದಿಂದ ಕೂಡಿತ್ತು ಹಾಗೂ ಸಮಯ ತೆಗದುಕೊಳ್ಳುತ್ತಿತ್ತು. ಆದರೆ, ಕಾನೂನು ನೆರವು ಒಪ್ಪಂದ (ಎಂಎಲ್‌ಎಟಿ) ದಂತೆ ಗೃಹ ಸಚಿವಾಲಯ ನೇರವಾಗಿ ಸಮನ್ಸ್ ಅಥವಾ ವಾರಂಟ್ ಅನ್ನು ಲಂಡನ್‌ಲ್ಲಿರುವ ಹೈಕಮಿಷನ್‌ಗೆ ರವಾನಿಸಬಹುದಿತ್ತು. ಅದು ಅನಂತರ ಕೇಂದ್ರ ಪ್ರಾಧಿಕಾರಕ್ಕೆ ರವಾನೆಯಾಗುತ್ತಿತ್ತು. ನೀರವ್ ಮೋದಿ ಪ್ರಕರಣ ನಿಭಾಯಿಸಲು ಗಂಭೀರ ವಂಚನೆಗಳ ಕಚೇರಿ (ಎಸ್‌ಎಫ್‌ಒ)ಗೆ ವರ್ಗಾ ಯಿಸುವುದು ಉತ್ತಮ ಎಂದು ಬ್ರಿಟನ್ ಕೇಂದ್ರ ಪ್ರಾಧಿಕಾರ ನಿರ್ಧರಿಸಿತ್ತು.
ನೀರವ್ ಮೋದಿ ಇಂಗ್ಲೆಂಡ್‌ನಲ್ಲಿ ಇದ್ದಾರೆ ಎಂದು ಎಸ್‌ಎಫ್‌ಒ ಮಾರ್ಚ್‌ನಲ್ಲಿ ಭಾರತಕ್ಕೆ ದೃಢಪಡಿಸಿತ್ತು. ಅದಕ್ಕಿಂತ ಮೊದಲು ನೀರವ್ ಮೋದಿ ಯುರೋಪ್‌ನಲ್ಲಿದ್ದಾರೋ ಹಾಂಗ್‌ಕಾಂಗ್‌ನಲ್ಲಿದ್ದಾರೊ ಎಂಬ ಬಗ್ಗೆ ನಿರ್ಧರಿಸುವಲ್ಲಿ ಭಾರತ ಗೊಂದಲಕ್ಕೆ ಒಳಗಾಗಿತ್ತು. ಇದಾದ ಒಂದು ತಿಂಗಳ ಬಳಿಕ ಇಂಗ್ಲೆಂಡ್ ಅದನ್ನು ದೃಢಪಡಿಸಿತ್ತು. ಈ ಪ್ರಕರಣದಲ್ಲಿ ಭಾರತಕ್ಕೆ ನರೆವು ನೀಡಲು ಇಂಗ್ಲೆಂಡ್ ಎಸ್‌ಎಫ್‌ಒ ವಕೀಲ ಬೆರ್ರಿ ಸ್ಟಾನ್‌ಕೋಂಬೆ ಅವರನ್ನು ನಿಯೋಜಿಸಿತ್ತು.
ಭಾರತದ ಮನವಿಯನ್ನು ಪರಿಶೀಲಿಸಿದ ವಕೀಲ ಸ್ಟಾನ್‌ಕೋಂಬೆ ಹಾಗೂ ತಂಡ ಇನ್ನಷ್ಟು ದಾಖಲೆಗಳ ಅಗತ್ಯತೆ ಇದೆ ಎಂದು ಮನಗಂಡಿತ್ತು. ಅದಕ್ಕಾಗಿ ವಕೀಲರ ತಂಡ ಭಾರತಕ್ಕೆ ಮೂರು ಪತ್ರ ಬರೆದಿತ್ತು. ಆದರೆ, ಭಾರತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನೀರವ್ ಮೋದಿಯನ್ನು ಬಂಧಿಸಲು ಸಾಧ್ಯವಾಗುವಂತೆ ಪುರಾವೆಗಳನ್ನು ಸಂಗ್ರಹಿಸಲು ಭಾರತಕ್ಕೆ ಭೇಟಿ ನೀಡುವ ಇಚ್ಛೆಯನ್ನು ಕೂಡ ವಕೀಲರ ತಂಡ ವ್ಯಕ್ತಪಡಿಸಿತ್ತು. ಆದರೆ, ಭಾರತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಎನ್‌ಡಿಟಿವಿಗೆ ವರದಿ ಮಾಡಿದೆ.







