ಮಾ.18ಕ್ಕೆ ಅಂತಿಮ ನಿರ್ಧಾರ ಪ್ರಕಟ: ಸುಮಲತಾ ಅಂಬರೀಷ್

ಮಂಡ್ಯ, ಮಾ.11: ಲೋಕಸಭೆ ಚುನಾವಣೆ ಸಂಬಂಧ ಅಂತಿಮ ನಿರ್ಧಾರವನ್ನು ಮಾ.18 ರಂದು ಪ್ರಕಟಿಸುವ ಇಂಗಿತವನ್ನು ಸುಮಲತಾ ಅಂಬರೀಷ್ ವ್ಯಕ್ತಪಡಿಸಿದ್ದಾರೆ.
ರಾಜಕೀಯದಲ್ಲಿ ಕೊನೆ ಕ್ಷಣದವರೆಗೂ ಬದಲಾವಣೆ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಆದರೆ, ಸ್ಪರ್ಧಿಸುವ ವಿಚಾರದ ಬಗ್ಗೆ ಮಾ.18ರಂದು ಅಂತಿಮ ತೀರ್ಮಾನ ಕೈಗೊಳ್ಳುವ ಆಲೋಚನೆ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಕ್ಷೇತ್ರ ಪ್ರವಾಸಕ್ಕೆ ಬ್ರೇಕ್ ಹಾಕಿದ್ದ ಅವರು ಸೋಮವಾರ ನಾಗಮಂಗಲ ತಾಲೂಕಿನ ಬೆಳ್ಳೂರಿಗೆ ಭೇಟಿ ಇತ್ತು, ಹಲವು ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಬೆಂಬಲ ಕೋರಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಸಚಿವ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ನನ್ನೊಂದಿಗೂ ಮಾತನಾಡಿದ್ದಾರೆ. ಸ್ಪರ್ಧೆಗೆ ಅವರು ವಿರೋಧವನ್ನೇನೂ ವ್ಯಕ್ತಪಡಿಸಿಲ್ಲ. ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರಷ್ಟೇ ಎಂದರು.
ರೇವಣ್ಣ ಅವರ ಹೇಳಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷಮೆ ಯಾಚಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ತಮ್ಮ ಸ್ಪರ್ಧೆಗೆ ಕಾಂಗ್ರೆಸ್ ಕಾರ್ಯಕರ್ತರು, ಅಂಬರೀಷ್ ಅಭಿಮಾನಿಗಳಿಂದ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಿದರು.
ದೇವಸ್ಥಾನ ದರ್ಶನವನ್ನು ಮುಂದುವರಿಸಿರುವ ಅವರು, ಬೆಳ್ಳೂರು ಹೋಬಳಿ ಕದಬಳ್ಳಿ ಕಾವೇರಿ ರಂಗನಾಥ ದೇವಸ್ಥಾನಕ್ಕೆ ಭೇಟಿ ಇತ್ತು ಪೂಜೆ ಸಲ್ಲಿಸಿದರು.
ಲೋಕಸಭೆ ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಳ್ಳಲು ಸುಮಲತಾ ಅಂಬರೀಷ್ ನಿರ್ಧರಿಸಿದ್ದು, ಫೇಸ್‍ಬುಕ್ ಖಾತೆಯನ್ನು ತೆರೆದಿದ್ದಾರೆ.







