ಟಿ20 ಸರಣಿಯಲ್ಲಿ ವಿಂಡೀಸ್ ಧೂಳಿಪಟ
ವಿಲ್ಲಿ ಸಾಹಸ: ಇಂಗ್ಲೆಂಡ್ ಜಯಭೇರಿ
ಸೈಂಟ್ ಕಿಟ್ಸ್, ಮಾ.11: ವಿಂಡೀಸ್‌ನ ಶಿಸ್ತುರಹಿತ ಬ್ಯಾಟಿಂಗ್ ಸರದಿಯನ್ನು ಕಟ್ಟಿಹಾಕಿದ ಡೇವಿಡ್ ವಿಲ್ಲಿ ಇಂಗ್ಲೆಂಡ್ ತಂಡಕ್ಕೆ 3ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಆಂಗ್ಲರು 3-0ಯಿಂದ ವಶಪಡಿಸಿಕೊಂಡಿದ್ದಾರೆ. ಇಲ್ಲಿನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಧ್ಯಮ ವೇಗಿ ವಿಲ್ಲಿ ತಮ್ಮ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ (7ಕ್ಕೆ 4) ನೀಡಿ ಆತಿಥೇಯರನ್ನು 13 ಓವರ್‌ಗಳಲ್ಲಿ 71 ರನ್‌ಗೆ ನಿಯಂತ್ರಿಸಲು ನೆರವಾದರು. ಈ ಸಾಹಸಕ್ಕೆ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. ವಿಲ್ಲಿಯ ಸಹ ಆಟಗಾರ ಕ್ರಿಸ್ ಜೋರ್ಡನ್ ಸರಣಿಶ್ರೇಷ್ಠರಾಗಿ ಮೂಡಿಬಂದರು.
ಇಂಗ್ಲೆಂಡ್ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದ ಜಾನಿ ಬೈರ್‌ಸ್ಟೊ (37, 31 ಎಸೆತ), ಅಲೆಕ್ಸ್ ಹೇಲ್ಸ್ (20) ಸಾಧಾರಣ ಗುರಿಯನ್ನು ತಲುಪಲು ನೆರವಾದರು. 10.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಪ್ರವಾಸಿಗರು ಜಯ ಕಂಡರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್‌ಗೆ ವಿಲ್ಲಿ, ಮಾರ್ಕ್ ವುಡ್ (9ಕ್ಕೆ 3), ಆದಿಲ್ ರಶೀದ್ (18ಕ್ಕೆ 2) ಭಾರೀ ಆಘಾತ ನೀಡಿದರು. ಕೆರಿಬಿಯನ್ನರ ಪರ ಕಾಂಪ್‌ಬೆಲ್, ಪೂರನ್ ಹಾಗೂ ನಾಯಕ ಹೋಲ್ಡರ್ ತಲಾ 11 ರನ್ ಗಳಿಸಿ ಅತ್ಯಧಿಕ ಸ್ಕೋರರ್‌ಗಳು ಎನಿಸಿಕೊಂಡರು.
ಈ ಸೋಲಿನ ಮೂಲಕ ವಿಂಡೀಸ್ ಮತ್ತೊಂದು ಕಳಪೆ ದಾಖಲೆಗೆ ಪಾತ್ರವಾಗಿದೆ. ಟಿ20 ಇತಿಹಾಸದಲ್ಲಿ ಮೊದಲ ಬಾರಿಗೆ ಸತತ ಎರಡು ಪಂದ್ಯಗಳಲ್ಲಿ 75ಕ್ಕಿಂತ ಕಡಿಮೆ ರನ್ ಒಳಗೆ ಆಲೌಟ್ ಆಗಿದೆ.







