ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ: ಭದ್ರತೆಗಾಗಿ 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ

ಚಿಕ್ಕಮಗಳೂರು, ಮಾ.12: ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುವುದು. ಇದರೊಂದಿಗೆ ಅರೆ ಸೇನಾಪಡೆಯ ಸಿಬ್ಬಂದಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಮಂಗಳವಾರ ಎಸ್ಪಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳ ಪರಿಶೀಲನೆಗಾಗಿ ಹಿರಿಯ ಪೊಲೀಸ್ ಮುಖ್ಯಾಧಿಕಾರಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ. ಪ್ರಚಾರದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲು ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಮಲೆನಾಡು ಭಾಗದಲ್ಲಿ ನಕ್ಸಲ್ ಪೀಡಿತ ಗ್ರಾಮಗಳಲ್ಲಿನ ಕೆಲ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇವುಗಳ ಪಟ್ಟಿ ತಯಾರಿಸಿ ಸರಕಾರದ ಅನುಮೋದನೆಗೆ ಕಳಿಸಲಾಗಿದ್ದು, ಶೀಘ್ರ ಜಿಲ್ಲೆಯಲ್ಲಿರುವ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ಸಿಗಲಿದೆ ಎಂದ ಅವರು, ಇಂತಹ ಮತಗಟ್ಟೆಗಳಲ್ಲಿ ಅಹಿತಕರ ಘಟನೆಗಳು, ಅಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸಿಸಿ ಕ್ಯಾಮರಗಳನ್ನೂ ಅಳವಡಿಸಲಾಗುವುದು ಎಂದರು.
ಚುನಾವಣಾ ಸಂದರ್ಭಗಳಲ್ಲಿ ನಕ್ಸಲರು ಚುನಾವಣೆ ಬಹಿಷ್ಕರಿಸುವ ಬ್ಯಾನರ್, ಪೋಸ್ಟರ್ ಗಳನ್ನು ಹಾಕುವುದು ಈ ಹಿಂದೆ ವರದಿಯಾಗಿದೆ. ಗ್ರಾಮಸ್ಥರ ಮೂಲಕವೂ ನಕ್ಸಲರು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಪ್ರದೇಶಗಳೆಂದು ಗುರುತಿಸಲಾದ ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯಿಂದ ಜನಜಾಗೃತಿ ಸಭೆಗಳ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇತ್ತೀಚೆಗೆ ಕೇರಳದಲ್ಲಿ ಪೊಲೀಸರು-ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಅಲ್ಲಿನ ನಕ್ಸಲರು ಜಿಲ್ಲೆಗೆ ಬರಬಹುದಾದ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ನಕ್ಸಲರು ಒಳನುಸುಳುವ ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಗಾ ವಹಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ. ಜಿಲ್ಲೆಯ ನಕ್ಸಲ್ ಪೀಡಿತ ಗ್ರಾಮಗಳ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಿಗೆ ಪೊಲೀಸ್ ಹಾಗೂ ಅರೆ ಸೇನಾ ಪಡೆಗಳ ಸಿಬ್ಬಂದಿಯಿಂದ ಅಗತ್ಯ ಭದ್ರತೆಯನ್ನು ಕಲ್ಪಿಸಲಾಗುವುದು.
ಒಟ್ಟಾರೆ ಜಿಲ್ಲಾದ್ಯಂತ ಪೊಲೀಸ್, ಅರೆಸೇನಾಪಡೆ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿ ಸೇರಿ ಸುಮಾರು 2000 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುವುದು ಎಂದ ಅವರು, ಎಂಸಿಸಿ ಕಾನೂನಿನಂತೆ ಜಿಲ್ಲಾದ್ಯಂತ ಸರಕಾರಿ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳ ಜಾಹೀರಾತು, ಪ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಉಪಸ್ಥಿತರಿದ್ದರು.
ಚುನಾವಣಾ ಸಂದರ್ಭ ಅಕ್ರಮ, ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡಬಹುದೆಂಬ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ 1008 ರೌಡಿಶೀಟರ್ ಗಳ ಪಟ್ಟಿ ತಯಾರಿಸಲಾಗಿದೆ. ಈ ಪೈಕಿ ಸುಮಾರು 600 ರೌಡಿಶೀಟರ್ ಗಳಿಗೆ ಎಚ್ಚರಿಕೆಯ ತಿಳುವಳಿಕೆ ನೀಡಲಾಗಿದೆ. ಇಂತಹವರು ಚುನಾವಣಾ ಸಂದರ್ಭ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು.
-ಹರೀಶ್ ಪಾಂಡೆ, ಎಸ್ಪಿಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಜರಗಿಸುತ್ತಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. 2014ರ ಚುನಾವಣೆಯಿಂದ 2018ರ ಚುನಾವಣೆವರೆಗೆ ಒಟ್ಟು 64 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿತ್ತು. ಈ ಪೈಕಿ 15 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, 24 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. 18 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿವೆ ಎಂದ ಅವರು, ನೀತಿ ಸಂಹಿತೆ ಉಲ್ಲಂಘಟನೆ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿಯೇ ಪರಿಗಣಿಸುತ್ತಿದೆ ಎಂಬುದಕ್ಕೆ ಈ ಅಂಕಿ ಅಂಶಗಳು ಸಾಕ್ಷಿಯಾಗಿವೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿಲ್ಲ.
-ಹರೀಶ್ ಪಾಂಡೆ, ಎಸ್ಪಿ







