ಬಿಜೆಪಿ ಮುಖಂಡ ಅನ್ವರ್ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನ- ಎಸ್ಪಿ ಹರೀಶ್ ಪಾಂಡೆ

ಚಿಕ್ಕಮಗಳೂರು, ಮಾ.11: ನಗರದಲ್ಲಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿ ಮುಖಂಡ ಅನ್ವರ್ ಹತ್ಯೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಮಂಗಳವಾರ ಎಸ್ಪಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಅನ್ವರ್ ಹತ್ಯೆ ಪ್ರಕರಣದ ತನಿಖೆಯ ಕಾರ್ಯಾಚರಣೆ ಗಂಭೀರವಾಗಿ ನಡೆಯುತ್ತಿದೆ. ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣದ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದ ಅವರು, ತನಿಖೆಯ ದೃಷ್ಟಿಯಿಂದಾಗಿ ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.
ಶೃಂಗೇರಿಯ ಅಭಿಷೇಕ್ ಕೊಲೆ ಪ್ರಕರಣ ಹಾಗೂ ಮೂಡಿಗೆರೆಯ ಧನ್ಯಶ್ರೀ ಪ್ರಕರಣದ ತನಿಖೆಯೂ ಪ್ರಗತಿಯಲ್ಲಿದ್ದು, ಎರಡೂ ಪ್ರಕರಣ ಮುಕ್ತಾಯದ ಹಂತದಲ್ಲಿದೆ. ಅತ್ಯಸಂತ ಸೂಕ್ಷ್ಮ ಪ್ರಕರಣವಾಗಿರುವುದರಿಂದ ತನಿಖೆಯನ್ನು ಜಾಗರೂಕತೆಯಿಂದ ಕೈಗೊಳ್ಳಲಾಗುತ್ತಿದೆ. ಸೂಕ್ತ ಸಾಕ್ಷಾಧಾರ ಕಲೆ ಹಾಕುತ್ತಿದ್ದು, ಪ್ರಕರಣಕ್ಕೆ ಶೀಘ್ರ ಇತಿಶ್ರೀ ಹಾಡಲಾಗುವುದೆಂದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಾಲ್ಕು ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದು, ತರೀಕೆರೆಯಲ್ಲಿ ಎರಡು, ಕಡೂರಿನಲ್ಲಿ ಒಂದು ಹಾಗೂ ಚಿಕ್ಕಮಗಳೂರಿನಲ್ಲಿ ಒಂದು ಪ್ರಕರಣ ನಡೆದಿದೆ. ಈ ಪೈಕಿ ಕಡೂರು, ತರೀಕೆರೆಯ ಪ್ರಕರಣಗಳನ್ನು ಬೇಧಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದ ಅವರು, ಚಿಕ್ಕಮಗಳೂರಿನಲ್ಲಿ ನಡೆದ ಸರಗಳ್ಳತನ ಪ್ರಕರಣ ತನಿಖೆಯಲ್ಲಿದೆ ಎಂದರು.
ಚೆಕ್‍ಪೋಸ್ಟ್ ಗೆ ಪೆಟ್ರೋಲ್ ಬಾಂಬ್ ಎಸೆದಿದ್ದು ನಕ್ಸಲರಲ್ಲ
ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲ್ಲಿರು ಬಸ್ರಿಕಲ್ ಗ್ರಾಮದ ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಗೆ ಇತ್ತೀಚೆಗೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ. ಇದು ನೂರಕ್ಕೆ ನೂರರಷ್ಟು ನಕ್ಸಲರ ಕೃತ್ಯವಲ್ಲ. ಪೆಟ್ರೋಲ್ ಬಾಂಬ್ ತಯಾರಿಸಲು ಬಳಸಿದ ಮದ್ಯದ ಬಾಟಲಿಗಳನ್ನು ಎಂಎಸ್‍ಐಲ್‍ನಲ್ಲಿ ಖರೀದಿಸಲಾಗಿದ್ದು, ಹೊಸ ಬಾಟಲಿಗಳನ್ನೇ ಕೃತ್ಯಕ್ಕೆ ಬಳಸಲಾಗಿದೆ. ಕೃತ್ಯ ಎಸಗಿಸದ ಆರೋಪಿಗಳ ಸುಳಿವು ಸಿಕ್ಕಿದ್ದು, ಸೂಕ್ತ ಸಾಕ್ಷಾಧಾರಗಳ ಆವಶ್ಯಕತೆ ಇರುವುದರಿಂದ ಈ ನಿಟ್ಟಿನಲ್ಲಿ ತನಿಖೆ ಸಾಗಿದೆ ಎಂದರು.







