ಮಾ.13ರಂದು ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಕಾರ್ಯಕ್ಕೆ ಚಾಲನೆ

ಉಡುಪಿ, ಮಾ. 12: ಪರ್ಯಾಯ ಪಲಿಮಾರು ಮಠದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಶ್ರೀಕೃಷ್ಣ ಮಠದ ಗರ್ಭಗುಡಿಯ ಮೇಲ್ಛಾವಣಿಯನ್ನು ಸುವರ್ಣಮಯ ಗೋಪುರವನ್ನಾಗಿಸುವ ಕಾರ್ಯಕ್ಕೆ ಮಾ.13ರಂದು ವಿದ್ಯುಕ್ತ ಚಾಲನೆ ದೊರೆಯಲಿದೆ.
ಬುಧವಾರ ಮುಂಜಾನೆಯಿಂದ ಮಧ್ಯಾಹ್ನದವರೆಗಿನ ಪೂಜೆಗಳನ್ನು ಬೆಳಗ್ಗೆ 11ಗಂಟೆಗೆ ಮುಗಿಸಿ, ಗರ್ಭಗೃಹದ ಬಾಗಿಲು ಮುಚ್ಚಿದ ಬಳಿಕ ಮಾಡಿನ ಕೆಲಸ ಆರಂಭಿಸಲಾಗುವುದು. ಸಂಜೆ 5ಗಂಟೆಗೆ ಕೆಲಸವನ್ನು ಮುಗಿಸಿ ರಾತ್ರಿ ಪೂಜೆಯ ಬಳಿಕ ಅಗತ್ಯ ಇದ್ದಲ್ಲಿ ಮತ್ತೆ ರಾತ್ರಿ ಕೆಲಸ ಮುಂದುವರಿಸಲಾಗುವುದು ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.
ಸುವರ್ಣ ಗೋಪುರದ ಕೆಲಸದಿಂದ ಶ್ರೀಕೃಷ್ಣ ದೇವರಿಗೆ ನಿತ್ಯ ನಡೆಯುವ ಎಲ್ಲ ಸೇವೆಗಳು ಅಬಾಧಿತವಾಗಿ ನಡೆಯಲಿದ್ದು, ಉತ್ಸವಾದಿಗಳು ಯಥಾ ಪ್ರಕಾರ ನಡೆಯಲಿವೆ. ಆದರೆ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ. ಇದರಿಂದ ಭಕ್ತರಿಗೆ ಶ್ರೀದೇವರ ದರ್ಶನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ವಾಸ್ತುತಜ್ಞ ಸುಬ್ರಹ್ಮಣ್ಯ ಅವದಾನಿ ಹೇಳಿದರು.
ಗೋಪುರದ ಉಸ್ತುವಾರಿ ವೆಂಕಟೇಶ್ ಶೇಟ್ ಮಾತನಾಡಿ, ಮೊದಲ ಹಂತ ದಲ್ಲಿ 1100 ಚದರ ಅಡಿ ವಿಸ್ತ್ರೀರ್ಣದ ಮೇಲಿನ ಮಾಡು ಮತ್ತು ಎರಡನೆ ಹಂತದಲ್ಲಿ 1200 ಚದರ ಅಡಿ ವಿಸ್ತ್ರೀರ್ಣದ ಕೆಳಗಿನ ಮಾಡಿನ ಕೆಲಸ ನಡೆಸಲಾಗುವುದು. ಗೋಪುರದ ಮೇಲ್ಛಾವಣಿಯಲ್ಲಿ ಮರ, ತಾಮ್ರದ ಹೊದಿಕೆ, ನಂತರ ಬೆಳ್ಳಿ ಶೀಟುಗಳನ್ನು ಹಾಕಿ ಮೇಲೆ ಚಿನ್ನವನ್ನು ಹಾಕಲಾಗುವುದು ಎಂದು ತಿಳಿಸಿದರು.
ಸುವರ್ಣ ಗೋಪುರಕ್ಕೆ ಒಟ್ಟು 23 ಕ್ಯಾರೆಟ್‌ನ 100 ಕೆ.ಜಿ. ಚಿನ್ನ, 800 ಕೆ.ಜಿ. ಬೆಳ್ಳಿ, 100 ಕೆ.ಜಿ. ತಾಮ್ರವನ್ನು ಬಳಸಲಾಗುತ್ತಿದೆ. ಈಗಾಗಲೇ ಶೇ.70 ರಷ್ಟು ಚಿನ್ನ ಸಂಗ್ರಹವಾಗಿದೆ. ಹೊದಿಕೆಯಲ್ಲಿ 14 ಇಂಚಿನ ಒಂದು ಶೀಟಿನಲ್ಲಿ 20ಗ್ರಾಂ ಚಿನ್ನ, 160 ಗ್ರಾಂ ಬೆಳ್ಳಿ ಇರುತ್ತದೆ. ಇಂತಹ 5000 ಶೀಟುಗಳನ್ನು ಬಳಸಲಾಗುತ್ತದೆ. 15 ಮಂದಿ ಬಂಗಾರದ ಕೆಲಸದಲ್ಲಿ ಹಾಗೂ 10 ಮಂದಿ ಮರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಸುವರ್ಣ ಗೋಪುರದ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.







