ಹೇಳಿದಂತೆ ಕೇಳದಿದ್ದರೆ ನಿನ್ನ ಬದುಕನ್ನು ನರಕ ಮಾಡುತ್ತೇನೆ ಎಂದು ರಾಕೇಶ್ ಅಸ್ತಾನಾ ಬೆದರಿಸಿದ್ದರು
ಕ್ರಿಶ್ಚಿಯನ್ ಮೈಕಲ್ ಆರೋಪ

ಹೊಸದಿಲಿ,ಮಾ.12: ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ನನ್ನನ್ನು ದುಬೈಯಲ್ಲಿ ಭೇಟಿಯಾಗಿದ್ದರು ಮತ್ತು ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ತನಿಖಾ ಸಂಸ್ಥೆ ಹೇಳಿದಂತೆ ಕೇಳದಿದ್ದರೆ ನನ್ನ ಜೀವನವನ್ನು ನರಕ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಹಲವು ಕೋಟಿ ಮೊತ್ತದ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಮಂಗಳವಾರ ದಿಲ್ಲಿ ನ್ಯಾಯಾಲಯದಲ್ಲಿ ತಿಳಿಸಿದ್ದಾನೆ.
“ಜೈಲಿನಲ್ಲಿ ನನ್ನ ಪಕ್ಕದ ಸೆಲ್‌ನಲ್ಲಿ ಚೋಟಾ ರಾಜನ್‌ನನ್ನು ಕೂಡಿ ಹಾಕಲಾಗಿದೆ. ಹಲವು ಜನರನ್ನು ಹತ್ಯೆ ಮಾಡಿರುವ ಓರ್ವ ಭೂಗತ ಪಾತಕಿಯ ಜೊತೆ ನನ್ನನ್ನು ಯಾಕಾಗಿ ಬಂಧಿಸಿಡಲಾಗಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎಂದು ಮೈಕಲ್ ದೂರಿಕೊಂಡಿದ್ದಾರೆ. “ನನ್ನನ್ನು 16-17 ಕಾಶ್ಮೀರಿ ಪ್ರತ್ಯೇಕತವಾದಿಗಳ ಜೊತೆ ಕೂಡಿ ಹಾಕಲಾಗಿದೆ” ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರ ಮುಂದೆ ಕ್ರಿಶ್ಚಿಯನ್ ಮೈಕಲ್ ಅಲವತ್ತುಕೊಂಡಿದ್ದ.
“ಜೈಲಿನಲ್ಲಿ ನನಗೆ ಮಾನಸಿಕ ಹಿಂಸೆ ನೀಡಲಾಗಿದೆ” ಎಂಬ ಮೈಕಲ್ ಆರೋಪವನ್ನು ಪರಿಗಣಿಸಿರುವ ನ್ಯಾಯಾಲಯ ಗುರುವಾರದ ಒಳಗಾಗಿ ವಿಚಾರಣೆಯ ಸಿಸಿಟಿವಿ ದೃಶ್ಯಗಳು ಮತ್ತು ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ತನಿಖಾ ಸಂಸ್ಥೆಗೆ ಸೂಚಿಸಿದೆ.





