ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭವಿಲ್ಲ: ಮಾಜಿ ಸಚಿವ ಎ.ಮಂಜು

ಬೆಂಗಳೂರು, ಮಾ.12: ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ರಾಜ್ಯಕ್ಕಾಗಲಿ, ಕಾಂಗ್ರೆಸ್ ಪಕ್ಷಕ್ಕಾಗಲಿ ಯಾವುದೇ ಲಾಭವಾಗುವುದಿಲ್ಲ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಯಿಂದ ಜೆಡಿಎಸ್‌ಗೆ ಲಾಭವೇ ಹೊರತು, ರಾಜ್ಯಕ್ಕಲ್ಲ. ಒಂದು ಕುಟುಂಬಕ್ಕೆ ಮಾತ್ರ ಈ ಮೈತ್ರಿ ಲಾಭ ತಂದುಕೊಡಲಿದೆ. ಕಾಂಗ್ರೆಸ್ ಪಕ್ಷಕ್ಕಾಗಲಿ, ಜನರಿಗಾಗಲಿ, ಕಾರ್ಯಕರ್ತರಿಗಾಗಲಿ ಇದರಿಂದ ಯಾವುದೇ ಲಾಭವಿಲ್ಲ ಎಂದರು.
ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬಕ್ಕೆ ಹೆದರುವ ಜಾಯಾಮಾನ ನನ್ನದಲ್ಲ. ದೇವೇಗೌಡರ ರಾಜಕೀಯ ಪುನರ್ ಜನ್ಮಕ್ಕಾಗಿ ನಾವು ಕೆಲಸ ಮಾಡಿದ್ದೇವೆ. ದೇವೇಗೌಡರ ಮೊಮ್ಮಕ್ಕಳಿಗೆ ಇನ್ನೂ ವಯಸ್ಸಿದೆ, ಅವಕಾಶಗಳು ಸಿಗುತ್ತದೆ ಎನ್ನುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯನ್ನು ಅವರು ವಿರೋಧಿಸಿದರು.
ಮುಂದಿನ ದಿನಗಳಲ್ಲಿ ಮೊಮ್ಮಕ್ಕಳನ್ನು ರಾಜಕೀಯವಾಗಿ ದಡ ಸೇರಿಸಲು ಮೈತ್ರಿ ಧರ್ಮದ ಮೂಲಕ ದೇವೇಗೌಡರು ಮುಂದಾಗಿದ್ದಾರೆ. ಈ ಮೈತ್ರಿಯಿಂದ ದೇವೇಗೌಡರ ಕುಟುಂಬಕ್ಕೆ ಮಾತ್ರ ಲಾಭವಾಗುತ್ತದೆ ಎಂದು ಮಂಜು ಹೇಳಿದರು.





