ಕೇಂದ್ರ ಸರಕಾರ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿರುವುದು ದುರಂತ: ಎಚ್.ಎಸ್.ದೊರೆಸ್ವಾಮಿ
ಪ್ರಗತಿಪರರಿಂದ ಪ್ರತಿಭಟನೆ

ಬೆಂಗಳೂರು, ಮಾ.12: ಕೇಂದ್ರದ ಮೋದಿ ಸರಕಾರ ರಫೇಲ್ ಹಗರಣ ಸೇರಿದಂತೆ ಇನ್ನಿತರ ದುರಾಡಳಿತಗಳನ್ನು ಬಯಲಿಗೆಳೆಯುವ ಪತ್ರಿಕೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವ ನಡೆಯನ್ನು ಖಂಡಿಸಿ ಪ್ರಗತಿಪರರು ಇಂದಿಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಎಂ.ಜಿ.ರಸ್ತೆಯ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ ಗ್ರಾಮ ಸೇವಾ ಸಂಘ ಸಹಯೋಗದೊಂದಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ದುರಾಡಳಿ ಹಾಗೂ ಅಕ್ರಮವನ್ನು ಜನರ ಮುಂದಿಟ್ಟ ಪತ್ರಿಕಾರಂಗವನ್ನು ದಮನಗೊಳಿಸುವ ನೀತಿ ಕೇಂದ್ರ ಸರಕಾರ ಅನುಸರಿಸುತ್ತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗ ಎಂದು ಭಾವಿಸಿರುವ ಪತ್ರಿಕಾರಂಗದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಐದು ವರ್ಷದ ಅವಧಿಯಲ್ಲಿ ಕೇಂದ್ರ ಸರಕಾರದ ಆಡಳಿತ ನೀತಿಯನ್ನು ಪ್ರಶ್ನಿಸುವ ಸಂಘ, ಸಂಸ್ಥೆ ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಯಿತು. ರಫೇಲ್ ವ್ಯವಹಾರದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ. ಇದನ್ನು ತನಿಖಾ ವರದಿ ಮೂಲಕ ಬಯಲುಗೆಳೆದ ಪತ್ರಿಕೆಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಮುಂದೆ ರಫೇಲ್ ವ್ಯವಹಾರದ ಕಡತಗಳು ಕಳ್ಳತನವಾಗಿವೆ ಎಂದು ಹೇಳಿದೆ. ಬಳಿಕ ಅದರ ನಕಲು (ಜೆರಾಕ್ಸ್) ಪ್ರತಿಗಳು ಸಿಗುತ್ತಿಲ್ಲ ಎಂದು ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ.
ಇದನ್ನು ಬಯಲಿಗೆಳೆದ ‘ಎನ್‌ಡಿಟಿವಿ’ ವಾಹನಿ ಹಾಗೂ ‘ದಿ ಹಿಂದೂ’ ಪತ್ರಿಕೆಯ ಸ್ವಾತಂತ್ರ್ಯವನ್ನು ಹರಣ ಮಾಡಲು ಹೊರಟಿರುವುದು ಸರಿಯಲ್ಲ. ಸಾಂವಿಧಾನಿಕವಾಗಿ ನೀಡಿರುವ ಅಭಿವ್ಯಕ್ತಿ ಸ್ವಾಂತ್ರ್ಯವನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದರು.
ಚಿಂತಕ, ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, ರಫೇಲ್ ವ್ಯವಹಾರದ ಕಡತಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಕೇಂದ್ರ ಸರಕಾರ ಜನರ ರಕ್ಷಣೆ ಹೇಗೆ ಮಾಡುತ್ತದೆ. ಕೆಲ ಮಾಧ್ಯಮ ಸಂಸ್ಥೆಗಳು ಕೇಂದ್ರ ಸರಕಾರದ ಏಜೆಂಟ್‌ನಂತಾಗಿವೆ. ಈ ನಡುವೆ, ರಫೇಲ್ ಹಗರಣದ ವರದಿಯನ್ನು ಪ್ರಕಟಿಸುವ ಪತ್ರಕರ್ತರನ್ನು ಹಾಗೂ ಪತ್ರಿಕೆಗಳನ್ನು ದಮನ ಮಾಡಲು ಕೇಂದ್ರ ಸರಕಾರ ಹೊರಟಿದೆ ಎಂದರು.
ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಬೋಳುವಾರು ಮುಹಮ್ಮದ್ ಕುಂಞ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಚಲನಚಿತ್ರ ನಿರ್ದೇಶಕ ಬಿ.ಸುರೇಶ್, ಪತ್ರಕರ್ತ ಸುಗತ ಶ್ರೀನಿವಾಸರಾಜು ಸೇರಿದಂತೆ ಪ್ರಮುಖರಿದ್ದರು.






.jpg)
.jpg)
.jpg)

