ಕೃಷ್ಣಮೃಗ ಭೇಟೆ ಪ್ರಕರಣ: ಸೈಫ್ ಅಲಿ ಖಾನ್, ಇತರ ಮೂವರಿಗೆ ಹೈಕೋರ್ಟ್ ನೋಟಿಸ್

ಜೋಧಪುರ, ಮಾ. 12: 1998 ಎರಡು ಕೃಷ್ಣ ಮೃಗಗಳನ್ನು ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ-ನಟಿಯರಾದ ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ, ನೀಲಮ್ ಹಾಗೂ ಸ್ಥಳೀಯ ನಿವಾಸಿ ದುಶ್ಯಂತ ಸಿಂಗ್ ವಿರುದ್ಧ ರಾಜಸ್ಥಾನ ಹೈಕೋರ್ಟ್ ನೋಟಿಸು ಜಾರಿ ಮಾಡಿದೆ.
ಐವರು ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ರಾಜ್ಯ ಸರಕಾರ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. 1998 ಅಕ್ಟೋಬರ್ 1-2ರಂದು ಜೋಧ್‌ಪುರದ ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣ ಮೃಗಗಳನ್ನು ಭೇಟೆಯಾಡಿದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಧಾನ ಆರೋಪಿಯಾಗಿದ್ದರು. ಸೋನಾಲಿ ಬೇಂದ್ರೆ, ತಬು, ನೀಲಮ್ ಹಾಗೂ ದುಷ್ಯಂತ ಸಿಂಗ್ ಕೃಷ್ಣ ಮೃಗ ಭೇಟೆಯಾಡಲು ಖಾನ್‌ಗೆ ಬೆಂಬಲ ನೀಡಿದ ಆರೋಪಕ್ಕೆ ಒಳಗಾಗಿದ್ದರು. ಜೋಧಪುರದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಕಳೆದ ವರ್ಷ ಎಪ್ರಿಲ್ 5ರಂದು ಸಲ್ಮಾನ್ ಖಾನ್ ಅವರಿಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಸಹ ಆರೋಪಿ ನಟರು ಹಾಗೂ ಸ್ಥಳೀಯ ನಿವಾಸಿಯನ್ನು ಖುಲಾಸೆಗೊಳಿಸಿತ್ತು.
Next Story





