ಸತ್ಯನಾರಾಯಣರಾವ್ ವಿರುದ್ಧದ ಪ್ರಕರಣ: ಪ್ರತಿವಾದಿಯನ್ನಾಗಿ ಪರಿಗಣಿಸಲು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ಡಿಐಜಿ ರೂಪಾ

ಬೆಂಗಳೂರು, ಮಾ.12: ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್‌ಗೆ ಜೈಲಿನಲ್ಲಿ ವಿಐಪಿ ಸೌಲಭ್ಯ ನೀಡಲು ಲಂಚ ಪಡೆದಿದ್ದಾರೆಂದು ಆರೋಪಿಸಲಾದ ದೂರು ರದ್ದುಗೊಳಿಸಲು ಕೋರಿ ಹಿರಿಯ ಪೊಲೀಸ್ ಅಧಿಕಾರಿ ಎಚ್.ಎನ್.ಸತ್ಯನಾರಾಯಣರಾವ್ ಸಲ್ಲಿಸಿರುವ ಅರ್ಜಿಯಲ್ಲಿ ನನ್ನನ್ನೂ ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಡಿಐಜಿ ಡಿ.ರೂಪಾ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಸತ್ಯನಾರಾಯಣರಾವ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರೂಪಾ ಪರ ವಕೀಲ ಭರತ್ ಕುಮಾರ್ ಅವರು, ಅರ್ಜಿದಾರರು ಡಿ.ರೂಪಾ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಅವರನ್ನು ಸೇರ್ಪಡೆ ಮಾಡಿಲ್ಲ. ಹೀಗಾಗಿ, ಅವರನ್ನೂ ಪ್ರತಿವಾದಿಯನ್ನಾಗಿ ಪರಿಗಣಿಸಲು ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡಬೇಕು ಎಂದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮಾ.18ಕ್ಕೆ ಮುಂದೂಡಿದೆ. ಸತ್ಯನಾರಾಯಣರಾವ್ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಜರುಗಿಸಬಾರದು ಎಂದು ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಲಾಗಿದೆ. ನಾನು ಕಾರಾಗೃಹ ಇಲಾಖೆ ಡಿಜಿಪಿ ಆಗಿದ್ದ ವೇಳೆ 2 ಕೊಟಿ ಲಂಚ ಪಡೆದು ಶಶಿಕಲಾಗೆ ವಿಐಪಿ ಸೌಲಭ್ಯ ಒದಗಿಸಿದ್ದೇನೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿರುವ ದೂರು ರದ್ದುಗೊಳಿಸಬೇಕೆಂದು ಕೋರಿ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಎನ್.ಸತ್ಯನಾರಾಯಣ ಸಲ್ಲಿಸಿರುವ ಅರ್ಜಿ ಇದಾಗಿದೆ.







