ಚು.ಆಯೋಗ 7 ಹಂತಗಳಲ್ಲಿ ಮತದಾನ ಘೋಷಿಸಲು ಕಾರಣವೇನು ಗೊತ್ತಾ?

ಹೊಸದಿಲ್ಲಿ,ಮಾ.12: ಮುಂದಿನ ಲೋಕಸಭಾ ಚುನಾವಣೆಯ ವೇಳೆ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೇಳಲಿರುವ ಸಾಧ್ಯತೆಯಿದೆಯೆಂದು ರಾಜ್ಯಪಾಲ ಕೇಶ್ರಿನಾಥ್ ತ್ರಿಪಾಠಿ ಎಚ್ಚರಿಕೆ ನೀಡಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದುದೇ, ಚುನಾವಣಾ ಆಯೋಗವು ಆ ರಾಜ್ಯದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಸುವ ನಿರ್ಧಾರ ಕೈಗೊಳ್ಳಲು ಕಾರಣವಾಯಿತೆಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರು ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಿಗೆ ಬರೆದ ಪತ್ರವನ್ನು ರಾಷ್ಟ್ರಪತಿಗಳಿಗೆ ರವಾನಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಚುನಾವಣಾ ದಿನಾಂಕಗಳನ್ನು ಘೋಷಿಸುವುದಕ್ಕೂ ಮೊದಲು ಚುನಾವಣಾ ಆಯುಕ್ತರು ಮತ್ತು ಗೃಹ ಕಾರ್ಯದರ್ಶಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಪಶ್ಚಿಮ ಬಂಗಾಳದಲ್ಲಿ ಅರೆಸೇನಾ ಪಡೆಗಳ ಲಭ್ಯತೆ ಮತ್ತು ಒಂದು ಲೋಕಸಭಾ ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಚಲಿಸುವ ಅವರ ಸಾಮರ್ಥ್ಯವನ್ನು ಪರಿಗಣಿಸಿ ಏಳು ಹಂತಗಳಲ್ಲಿ ಮತದಾನ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ರಾಜಕೀಯ ಹಿಂಸಾಚಾರವನ್ನು ನಿಯಂತ್ರಿಸಲು ರಾಜ್ಯಪಾಲರು ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿದ್ದರೆಂದು ಅವು ಹೇಳಿವೆ.
ಆದಾಗ್ಯೂ ರಾಜ್ಯಪಾಲರ ಈ ನಡೆಯ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಂತುಷ್ಟರಾಗಿದ್ದರು. ರಾಜ್ಯ ಸರಕಾರದ ವ್ಯವಹಾರಗಳಲ್ಲಿ ನಡೆಯುವ ಹಸ್ತಕ್ಷೇಪ ಇದಾಗಿದೆಯೆಂದು ಅವರು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ರಾಜ್ಯಪಾಲರು ಕರೆಯುವ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಹಾಗೂ ಅವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ರಾಜ್ಯದ ಕಾನೂನು ಮತ್ತು ಶಿಸ್ತು ಪರಿಸ್ಥಿತಿಗೆ ಸಂಬಂಧಿಸಿ ರಾಜ್ಯಪಾಲರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೂ ಹಲವಾರು ಪತ್ರಗಳನ್ನು ಬರೆದಿದ್ದರು’’ ಎಂದು ರಾಜ್ಯ ಸರಕಾರದ ಉನ್ನತ
ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಪಂಚಾಯತ್ ಚುನಾವಣೆಯ ಸಮಯದಲ್ಲಿ ನಡೆದ ಹಿಂಸಾಚಾರ ಹಾಗೂ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನಡೆಯುತ್ತಿರುವ ಘರ್ಷಣೆಗಳನ್ನು ರಾಜ್ಯಪಾಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರೆಂದು ಮೂಲಗಳು ತಿಳಿಸಿವೆ.







