ಪರಿಸರಕ್ಕೆ ಕಾರುಗಳು ಕೆಟ್ಟದ್ದಲ್ಲವೇ?: ಪಟಾಕಿಗಳನ್ನು ನಿಷೇಧಿಸಬೇಕು ಎನ್ನುವವರಿಗೆ ಸುಪ್ರೀಂ ಪ್ರಶ್ನೆ

ಹೊಸದಿಲ್ಲಿ,ಮಾ.12: ಭಾರತದಲ್ಲಿ ಪರಿಸರ ಮಾಲಿನ್ಯಕ್ಕೆ ವಾಹನಗಳು ಪ್ರಮುಖ ಕಾರಣವಾಗಿರಬಹುದು, ಹೀಗಿರುವಾಗ ಪ್ರತಿಯೊಬ್ಬರೂ ಪಟಾಕಿಗಳ ನಿಷೇಧದ ಹಿಂದೇಕೆ ಬಿದ್ದಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಪ್ರಶ್ನಿಸಿತು.
ಪಟಾಕಿಗಳು ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುವುದರಿಂದ ಅವುಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಗಳ ವೇಳೆ ನ್ಯಾ.ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ಅರ್ಜಿದಾರರ ಮುಂದೆ ಈ ಪ್ರಶ್ನೆಯನ್ನಿರಿಸಿತು. ಕಳೆದ ವರ್ಷ ಪಟಾಕಿಗಳನ್ನು ಸಿಡಿಸುವುದರ ವಿರುದ್ಧ ರಾಷ್ಟ್ರವ್ಯಾಪಿ ನಿರ್ಬಂಧಗಳನ್ನು ಹೇರಿದ್ದ ಸರ್ವೋಚ್ಚ ನ್ಯಾಯಾಲಯವು,ಇನ್ನು ಮುಂದೆ ಹಸಿರು ಪಟಾಕಿಗಳು ಮತ್ತು ಸುಧಾರಿತ ಪಟಾಕಿಗಳನ್ನು ಮಾತ್ರ ತಯಾರಿಸಬೇಕು ಎಂದು ಸ್ಪಷ್ಟಪಡಿಸಿತ್ತು. ಹಸಿರು ಪಟಾಕಿಗಳ ಸಂಯೋಜನೆ ಮತ್ತು ಸೂತ್ರವನ್ನು ಸರಕಾರವು ಇನ್ನಷ್ಟೇ ಪ್ರಕಟಿಸಬೇಕಿದೆ.
ಹಸಿರು ಪಟಾಕಿಗಳ ತಯಾರಿಕೆಯ ಕುರಿತು ಅನಿಶ್ಚಿತತೆಯಿಂದಾಗಿ ಸಹಸ್ರಾರು ಜನರು ನಿರುದ್ಯೋಗಿಗಳಾಗಿದ್ದಾರೆ ಎನ್ನುವುದನ್ನು ಬೆಟ್ಟು ಮಾಡಿದ ಪೀಠವು,ಪಟಾಕಿ ಉದ್ಯಮದಲ್ಲಿ ದುಡಿಯುತ್ತಿರುವವರ ಜನರ ಗತಿ ಏನಾಗಬಹುದು?, ಪಟಾಕಿಗಳ ತಯಾರಿಕೆಯನ್ನು ನಿಷೇಧಿಸಿದ ನಂತರ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಜನರು ತಮ್ಮ ಕುಟುಂಬಗಳನ್ನು ನಿರ್ವಹಿಸಬೇಕಿರುವುದರಿಂದ ನಾವು ದೀರ್ಘಕಾಲದವರೆಗೆ ಅವರನ್ನು ನಿರುದ್ಯೋಗಿ ಗಳನ್ನಾಗಿಸುವಂತಿಲ್ಲ. ಏನಿದ್ದರೂ ನೀವು ನಿರುದ್ಯೋಗವನ್ನು ಸೃಷ್ಟಿಸುವಂತಿಲ್ಲ. ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುವಂತಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಮಾರ್ಗಗಳನ್ನು ಕಂಡುಕೊಳ್ಳಿ. ಅದು ಕಾನೂನುಬದ್ಧ ವೃತ್ತಿಯಾಗಿದೆ, ಹೀಗಿರುವಾಗಿ ನೀವು ಪರವಾನಿಗೆಯನ್ನು ರದ್ದು ಮಾಡಲು ಹೇಗೆ ಸಾಧ್ಯ?, ಪರವಾನಿಗೆ ಷರತ್ತುಗಳನ್ನು ಬದಲಿಸುವುದು ಒಂದು ಪರಿಹಾರ ಮಾರ್ಗವಾಗಬಹುದು ಎಂದು ಹೇಳಿತು.
ಜೀವನೋಪಾಯ ಗಳಿಕೆಯ ಹಕ್ಕಿನ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಪರಿಶೀಲಿಸಬೇಕು ಎಂದ ಪೀಠವು,ಪಟಾಕಿಗಳು ಮತ್ತು ವಾಹನಗಳಿಂದ ಪರಿಸರ ಮಾಲಿನ್ಯದ ಕುರಿತು ತುಲನಾತ್ಮಕ ಅಧ್ಯಯನ ವರದಿಯನ್ನು ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಎನ್‌ಎಸ್ ನಾಡಕರ್ಣಿ ಅವರಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆಯು ಎ.3ರಂದು ನಡೆಯಲಿದೆ.







