ಪ್ರಜ್ಞೇಶ್, ಬೋಪಣ್ಣ ಜೋಡಿಗೆ ಸೋಲು
ಇಂಡಿಯನ್ ವೆಲ್ಸ್ ಬ್ಯಾಡ್ಮಿಂಟನ್ ಟೂರ್ನಿ

ಇಂಡಿಯನ್ ವೆಲ್ಸ್, ಮಾ.12: ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ತನಗಿಂತ ಮೇಲಿನ ರ್ಯಾಂಕಿನ ಆಟಗಾರರನ್ನು ಮಣಿಸಿ ಸುದ್ದಿಯಲ್ಲಿದ್ದ ಭಾರತದ ಖ್ಯಾತ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಇಂಡಿಯನ್ ವೆಲ್ಸ್ ಟೂರ್ನಿಯ ತಮ್ಮ ಮೂರನೇ ಸುತ್ತಿನ ಪಂದ್ಯದಲ್ಲಿ ಸೋತು ಹೊರನಡೆದಿದ್ದಾರೆ. ಕ್ರೊಯೇಶ್ಯದ ಇವೊ ಕಾರ್ಲೊವಿಕ್ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಪ್ರಬಲ ಪೈಪೋಟಿ ನೀಡಿ 3-6, 6-7(4) ಸೆಟ್‌ಗಳಿಂದ ಮಣಿದರು.
ಸುಮಾರು 1 ತಾಸು 13 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 16 ಏಸ್‌ಗಳನ್ನು ಸಿಡಿಸಿದ ಕಾರ್ಲೊವಿಕ್ ಗೆಲುವಿನ ಹಾದಿ ಕಂಡುಕೊಂಡರು.
ಎಟಿಪಿ 1000 ಟೂರ್ನಿಯೊಂದರಲ್ಲಿ ಇದು ಪ್ರಜ್ಞೇಶ್ ಅವರ ಮೊದಲ ಪ್ರದರ್ಶನವಾಗಿದೆ. ಟೂರ್ನಿಯಲ್ಲಿ ಸಾಧಿಸಿದ ಎರಡು ಅಮೂಲ್ಯ ಗೆಲುವುಗಳಿಂದ ಪ್ರಜ್ಞೇಶ್ 61 ರ್ಯಾಂಕಿಂಗ್ ಪಾಯಿಂಟ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರನ್ನು ವಿಶ್ವ ರ್ಯಾಂಕಿಂಗ್‌ನಲ್ಲಿ 82ನೇ ಸ್ಥಾನದಲ್ಲಿ ಇರಿಸಲಿದೆ. ಇನ್ನೊಂದೆಡೆ ಭಾರತದ ಮತ್ತೊಂದು ಭರವಸೆಯಾಗಿದ್ದ ಕರ್ನಾಟಕದ ರೋಹನ್ ಹಾಗೂ ಅವರು ಜೋಡಿ ಆಟಗಾರ ಡೆನಿಸ್ ಶಾಪಾವ್‌ಲೊವ್ ಅವರ ಎರಡನೇ ಸುತ್ತಿನ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಹಾಗೂ ಫಾಗ್ನಿನಿ ಜೋಡಿಗೆ 6-4, 1-6, 8-10 ಸೆಟ್‌ಗಳಿಂದ ಮಣಿದರು.
ಮೊದಲ ಗೇಮ್‌ನ ಗೆಲುವಿನ ಲಾಭವನ್ನು ಪಡೆಯಲು ವಿಫಲರಾಗಿ ಬೋಪಣ್ಣ ಜೋಡಿ ಟೂರ್ನಿಯಿಂದ ಹೊರನಡೆಯಿತು.
►ಸೋತು ಹೊರ ನಡೆದ ಝ್ವೆರೆವ್

ನೋವಿನೊಂದಿಗೆ ಆಡಿದ ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಎಟಿಪಿ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಿಂದ ಸೋತು ಹೊರಬಿದ್ದಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ 55ನೇ ಸ್ಥಾನದಲ್ಲಿರುವ ಜರ್ಮನಿಯ ಜಾನ್ ಲೆನ್ನಾರ್ಡ್ ಸ್ಟ್ರಫ್ ಅವರು ಝ್ವೆರೆವ್ ವಿರುದ್ಧ ತಮ್ಮ ಮೊದಲ ಜಯ ದಾಖಲಿಸಿ ಸಂಭ್ರಮಿಸಿದರು.
ಝ್ವೆರೆವ್ ವಿರುದ್ಧದ 5 ಪಂದ್ಯಗಳಲ್ಲಿ ಮೊದಲ ಬಾರಿ ಜಯ ಕಂಡಿರುವ ಸ್ಟ್ರಫ್ ಪ್ರಥಮ ಸೆಟ್‌ನಲ್ಲಿ ಒಂದು ಬಾರಿ ಎದುರಾಳಿಯ ಸರ್ವ್ ಮುರಿದರೆ, ಎರಡನೇ ಸೆಟ್‌ನಲ್ಲಿ ಮೂರು ಬಾರಿ ಮುರಿದು 6-3, 6-1 ಸೆಟ್‌ಗಳ ಜಯ ಸಾಧಿಸಿದರು.
ಮಾಸ್ಟರ್ಸ್ 1000 ವಿಭಾಗದಲ್ಲಿ ಮೂರು ಬಾರಿ ಪ್ರಶಸ್ತಿ ಜಯಿಸಿರುವ ಝ್ವೆರೆವ್ ಒಮ್ಮೆಯೂ ಇಂಡಿಯನ್ ವೆಲ್ಸ್ ಟೂರ್ನಿಯ ಪ್ರಶಸ್ತಿ ಗೆದ್ದಿಲ್ಲ. ಸ್ಟ್ರಫ್ ತಮ್ಮ ಮುಂದಿನ ಸುತ್ತಿನ ಪಂದ್ಯದಲ್ಲಿ ಕೆನಡಾದ ಮಿಲೊಸ್ ರಾವೊನಿಕ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದೆಡೆ ರಾವೊನಿಕ್ ಅಮೆರಿಕದ ಕ್ವಾಲಿಫೈಯರ್ ಆಟಗಾರ ಮಾರ್ಕೊಸ್ ಗಿರೊನ್ ಅವರನ್ನು ಮಣಿಸಿದರು.







