ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಲಿತರಿಂದ ಧರಣಿ

ಶಿವಮೊಗ್ಗ, ಮಾ.13: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಅಂಗಾಳ ಗ್ರಾಮದಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಜಗಜೀವನರಾಮ್ ಪ್ರತಿಮೆಗಳಿಗೆ ಅವಮಾನ ಮಾಡಿರುವ ಕಿಡಿಗೇಡಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಬುಧವಾರ ಸಮಿತಿಯ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ದುಷ್ಕರ್ಮಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.
ಅಕ್ಷಮ್ಯ: ಮಾ.9 ರ ಸಂಜೆ 7.30 ರ ಸುಮಾರಿಗೆ ಅಂಗಾಳ ಗ್ರಾಮದಲ್ಲಿರುವ ಮಾದಿಗ ಸಮಾಜದ ಬೀದಿಗೆ ನುಗ್ಗಿದ ಕೆಲ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ದಲಿತ ಸಮಾಜದ ಮುಖಂಡ ಎಸ್.ಪ್ರಸಾದ್ ಹಾಗೂ ಇತರರ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ. ತದನಂತರ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಾಜಿ ಉಪ ಪ್ರಧಾನಮಂತ್ರಿ ಬಾಬು ಜಗಜೀವನರಾಮ್ ಪ್ರತಿಮೆಗಳಿಗೆ ಚಪ್ಪಲಿ, ಕಲ್ಲುಗಳಿಂದ ಹೊಡೆದು ಅವಮಾನ ಮಾಡಲಾಗಿದೆ. ಅನಾಗರೀಕರಂತೆ ವರ್ತಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ದೌರ್ಜನ್ಯ ನಡೆಸಿದವರನ್ನು ಬಂಧಿಸಿ, ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ದಲಿತರ ವಿರುದ್ಧ ನಿರಂತರವಾಗಿ ದೌರ್ಜನ್ಯದದಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಪ್ರಮುಖರಾದ ಸಿ.ಮೂರ್ತಿ, ಹೆಚ್.ಎನ್. ಪ್ರಭು, ಎ.ಕೆ.ಹನುಮಂತಪ್ಪ ಮಂಗೋಟೆ ಸೇರಿದಂತೆ ಮೊದಲಾದವರಿದ್ದರು.







