ಬೆಂಗಳೂರಿನಾದ್ಯಂತ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಾರ್ಯ ಚುರುಕು
ಲೋಕಸಭಾ ಚುನಾವಣೆ ಹಿನ್ನೆಲೆ

ಬೆಂಗಳೂರು, ಮಾ.13: ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಬಿಎಂಪಿಯಿಂದ ನೆನೆಗುದಿಗೆ ಬಿದ್ದಿದ್ದ ಸಿಸಿ ಟಿವಿ ಅಳವಡಿಕೆ ಕಾರ್ಯ ಚುರುಕುಗೊಂಡಿವೆ.
ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಮತದಾರರಿಗೆ ಬಟ್ಟೆ, ಹಣ ಹಾಗೂ ಮತ್ತಿತರೆ ಆಮಿಷವೊಡ್ಡುವುದಕ್ಕೆ ತಡೆ ಹಾಕುವ ಉದ್ದೇಶದಿಂದ ಸಿಸಿಟಿವಿಗಳು ಸಹಕಾರಿಯಾಗಲಿದೆ. ಈ ಆಧಾರದ ಮೇಲೆ ಆಮಿಷವೊಡ್ಡುವವರನ್ನು ಬಂಧಿಸಿ ಕ್ರಮ ಕೈಗೊಳ್ಳಲು ಅವಕಾಶ ಸಿಕ್ಕಿದಂತಾಗುತ್ತದೆ. ನಗರ ವ್ಯಾಪ್ತಿಯ 198 ವಾರ್ಡುಗಳಲ್ಲಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಸಿಸಿವಿಟಿ ಕ್ಯಾಮರಾ ಅಳವಡಿಸಿದ್ದು, ಇವೆಲ್ಲವೂ ಚುನಾವಣೆಗೆ ರಾಯಭಾರಿಗಳಂತೆ ಕಾರ್ಯ ನಿರ್ವಹಿಸಲಿವೆ. ಎಲ್ಲ ಅಕ್ರಮ, ಅಹಿತಕರ ಘಟನೆಗಳು ನಡೆದರೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಲಿದೆ.
ನಗರದೆಲ್ಲೆಡೆ 8 ಸಾವಿರಕ್ಕೂ ಹೆಚ್ಚು ಸಿಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದು ಬಿಬಿಎಂಪಿ ಪ್ರಕಟಿಸಿತ್ತು. ಅದರಂತೆ ಸಿಸಿ ಟಿವಿ ಅಳವಡಿಕೆ ಕಾರ್ಯ ಆರಂಭಿಸಿದ್ದರೂ ಬಹುತೇಕ ಪೂರ್ಣಗೊಂಡಿರಲಿಲ್ಲ. ಪ್ರತಿ ವಾರ್ಡ್‌ಗೆ 1 ಕೋಟಿ ರೂ. ಅನುದಾನದಂತೆ ಕನಿಷ್ಠ 60 ಸಿಸಿ ಟಿವಿಗಳನ್ನು ಅಳವಡಿಸಲಾಗಿತ್ತು. ನಗರದಲ್ಲಿ ನಡೆಯುವ ಅಹಿತಕರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಪಾಲಿಕೆ ರಸ್ತೆಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವ ಕಾರ್ಯ ಆರಂಭಿಸಿತ್ತು. ಇದೀಗ ಚುನಾವಣೆ ಎದುರಾಗಿರುವುದರಿಂದ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಸಿಸಿ ಟಿವಿಗಳನ್ನು ಅಳವಡಿಸುವ ಕಾರ್ಯ ಸಮರೋಪಾದಿಯಲ್ಲಿ ಆರಂಭಗೊಂಡಿದೆ.







