ಬಿಜೆಪಿಯಿಂದ ರಾಜಕೀಯ ಕ್ಷೇತ್ರವೇ ಹಾಳಾಗಿದೆ: ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ

ಬೆಂಗಳೂರು, ಮಾ.13: ಧಾರ್ಮಿಕ, ರಾಜಕೀಯ ಕ್ಷೇತ್ರವನ್ನು ಕೆಡಿಸುತ್ತಿರುವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಏಕೈಕ ಉದ್ದೇಶದಿಂದ ನಾವೆಲ್ಲರೂ ಶಕ್ತಿಮೀರಿ ಕೆಲಸ ಮಾಡಬೇಕಿದೆ ಎಂದು ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ತಿಳಿಸಿದರು.
ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವಿರೋಧಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅನಂತಕುಮಾರ್ ಹೆಗಡೆ ಸೇರಿದಂತೆ ಜನಸಾಮಾನ್ಯರ ಭಾವನೆಗಳಿಗೆ ಧಕ್ಕೆ ತರುತ್ತಿರುವ ಬಿಜೆಪಿ ನಾಯಕರನ್ನು ಸೋಲಿಸುವುದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಪಣ ತೊಡಬೇಕಿದೆ ಎಂದು ತಿಳಿಸಿದರು.
ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಾರೆ. ಈಗಾಗಲೆ ಬಿಜೆಪಿ ನಾಯಕರು ಧಾರ್ಮಿಕ ವಿಚಾರಗಳಿಗೆ ರಾಜಕೀಯ ಬಣ್ಣ ಬಳಿದು ಸೌಹಾರ್ದಯುತವಾದ ವಾತಾವರಣವನ್ನು ಭಯಗ್ರಸ್ತಗೊಳಿಸಿದ್ದಾರೆ. ಇಂತಹ ನಾಯಕರು ಮತ್ತೊಮ್ಮೆ ಅಧಿಕಾರಕ್ಕೆ ಬರಬಾರದು ಎಂದು ಅವರು ಅಭಿಪ್ರಾಯಿಸಿದರು.
ಸಚಿವೆ ಜಯಮಾಲಾ ಮಾತನಾಡಿ, ಮಹಿಳೆಯರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ವರಿಷ್ಠರು ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ. ಈ ಬಾರಿಯ ಲೋಕಸಭಾ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿರುವುದರಿಂದ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಆದ್ಯತೆ ಆಗಲಿದೆ ಎಂದು ತಿಳಿಸಿದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಕ್ಕೆ ನನ್ನ ಹಾಗೂ ಸಚಿವ ದೇಶಪಾಂಡೆ ಅವರಿಂದ ವಿರೋಧವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪ್ರಭಾವ ಕಡಿಮೆಯಿದೆ. ಈ ಬಗ್ಗೆ ಕಾಂಗ್ರೆಸ್ ವರಿಷ್ಠರು ಗಂಭೀರವಾಗಿ ಆಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿ.
-ಮಾರ್ಗರೇಟ್ ಆಳ್ವಾ, ಮಾಜಿ ಸಚಿವೆ







