ಕೋಲಾರ ಲೋಕಸಭಾ ಕ್ಷೇತ್ರ: ಮುನಿಯಪ್ಪ ಸ್ಪರ್ಧೆಗೆ ‘ಕೈ’ ಮುಖಂಡರ ವಿರೋಧ ?

ಬೆಂಗಳೂರು, ಮಾ.13: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಲೋಕಸಭಾ ಸಮರಕ್ಕೆ ಅಣಿಯಾಗುತ್ತಿರುವ ಬೆನ್ನಲ್ಲೇ, ಕೋಲಾರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಸ್ಪರ್ಧೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.
ಪ್ರತಿ ಚುನಾವಣೆಯಲ್ಲೂ ಸ್ಥಳೀಯ ಮುಖಂಡರ ವಿರೋಧವನ್ನು ಎದುರಿಸಿಕೊಂಡೆ ಚುನಾವಣೆಯಲ್ಲಿ ಸ್ಪರ್ಧಿಸುವ ಕೆ.ಎಚ್.ಮುನಿಯಪ್ಪ ಅಂತಿಮವಾಗಿ ಗೆಲುವಿನ ನಗೆ ಬೀರುವುದು ಸಾಮಾನ್ಯ. ಸತತ ಏಳು ಬಾರಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಸೋಲರಿಯದ ಸರದಾರ ಮುನಿಯಪ್ಪಗೆ ಈ ಬಾರಿ ಮಾತ್ರ ಭಾರಿ ವಿರೋಧ ಎದುರಾಗಿದೆ ಎಂದು ಗೊತ್ತಾಗಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಮುನಿಯಪ್ಪ ವಿರುದ್ಧ ಪ್ರಚಾರ ಕೈಗೊಳ್ಳಲಾಗಿದೆ. ಏಳು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ, ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರೂ ಕೋಲಾರ ಕ್ಷೇತ್ರದ ಅಭಿವೃದ್ಧಿಗೆ ಗಮನಾರ್ಹವಾದ ಕೊಡುಗೆಯನ್ನು ನೀಡುವಲ್ಲಿ ವಿಫಲವಾಗಿದ್ದಾರೆ. ಆದುದರಿಂದ, ಈ ಬಾರಿ ಹೊಸ ಯುವ ಅಭ್ಯರ್ಥಿಗೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕಲ್ಪಿಸಬೇಕು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ.
ಕೋಲಾರ ಕ್ಷೇತ್ರದಲ್ಲಿ ಈ ಬಾರಿ ತನ್ನನ್ನು ಶತಾಯಗತಾಯ ಮಣಿಸಲೇಬೇಕು ಎಂದು ವಿರೋಧ ಪಕ್ಷದವರೊಂದಿಗೆ ಸ್ವ ಪಕ್ಷೀಯರು ಕೈ ಜೋಡಿಸಿರುವ ಮಾಹಿತಿಯನ್ನು ಪಡೆದಿರುವ ಮುನಿಯಪ್ಪಗೆ ಆತಂಕ ಎದುರಾಗಿದೆ. ಕೋಲಾರದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ದಲಿತ ಬಲಗೈ ಸಮುದಾಯಕ್ಕೆ ಸೇರಿದವರು ಹೆಚ್ಚಿದ್ದರೂ, ಎಡಗೈ ಸಮುದಾಯದ ಮುನಿಯಪ್ಪ ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.







