ಅಕ್ರಮ ವಲಸಿಗರ ಗಡೀಪಾರು: ಅಸ್ಸಾಂ ಸರಕಾರವನ್ನು ತರಾಟೆಗೆತ್ತಿಕೊಂಡ ಸುಪ್ರೀಂ

ಹೊಸದಿಲ್ಲಿ, ಮಾ.13: ಅಕ್ರಮ ವಲಸಿಗರ ಗಡೀಪಾರು ವಿಷಯವನ್ನು ಅಸ್ಸಾಂ ಸರಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ತರಾಟೆಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಇದು(ಗಡೀಪಾರು ವಿಷಯ) ಹಾಸ್ಯದ ವಿಷಯವಾಗಿಬಿಟ್ಟಿದೆ ಎಂದು ಅಸಮಾಧಾನ ಸೂಚಿಸಿದೆ.
ಬುಧವಾರದ ಕಲಾಪದಲ್ಲಿ ಅಸ್ಸಾಂ ಸರಕಾರದ ಯಾವುದೇ ಅಧಿಕಾರಿಗಳು ಹಾಜರಾಗದಿರುವುದನ್ನು ಉ್ಲಲೇಖಿಸಿದ ಸುಪ್ರೀಂಕೋರ್ಟ್, ಅಸ್ಸಾಂ ಸರಕಾರ ಈ ವಿಷಯವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ಹೇಳಿತು. ಇಲ್ಲಿ ಕುಳಿತಿರುವ ಸ್ಥಾನಿಕ ಆಯುಕ್ತರು ಅಸ್ಸಾಂನಲ್ಲಿರುವ ಸ್ಥಾನಬದ್ಧತೆ ಕೇಂದ್ರಗಳ ಕುರಿತು ಅಫಿದಾವಿತ್ ಸಲ್ಲಿಸಿದ್ದಾರೆ ಎಂದು ಮುಖ್ಯ ನ್ಯಾಯಾಧೀಶರ ನೇತೃತ್ವದ ನ್ಯಾಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನುದ್ದೇಶಿಸಿ ಹೇಳಿತು.
ಸುಪ್ರೀಂಕೋರ್ಟ್ 2005ರಲ್ಲಿ ಜಾರಿ ಮಾಡಿದ್ದ ಆದೇಶವನ್ನು ಸರಿಯಾಗಿ ಓದಬೇಕು. ಆ ಆದೇಶದಲ್ಲಿ ಅಸ್ಸಾಂ ಬಾಹ್ಯ ಆಕ್ರಮಣ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ತಿಳಿಸಲಾಗಿದೆ. ಈ ಬೆದರಿಕೆಯನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು.
ನ್ಯಾಯಾಧೀಕರಣವು ವಿದೇಶಿಯರೆಂದು ಘೋಷಿಸಿರುವ ಎಷ್ಟು ಮಂದಿಯನ್ನು ಸ್ಥಾನಬದ್ಧತೆ ಕೇಂದ್ರದಲ್ಲಿರಿಸಲಾಗಿದೆ, ಎಷ್ಟು ಮಂದಿಯನ್ನು ಅವರ ಮೂಲ ದೇಶಕ್ಕೆ ವಾಪಾಸು ಕಳಿಸಲಾಗಿದೆ ಎಂಬ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಅಸ್ಸಾಂ ಸರಕಾರಕ್ಕೆ ಸೂಚಿಸಿತು.
ಇದಕ್ಕೆ ಉತ್ತರಿಸಿದ ಅಸ್ಸಾಂ ಸರಕಾರ, ಕಳೆದ 10 ವರ್ಷಗಳಲ್ಲಿ 50 ಸಾವಿರಕ್ಕೂ ಅಧಿಕ ವಲಸಿಗರನ್ನು ವಿದೇಶಿಯರೆಂದು ಘೋಷಿಸಿರುವುದಾಗಿ ತಿಳಿಸಿತು. ಅಲ್ಲದೆ ವಿದೇಶಿಯರೆಂದು ಘೋಷಿಸಲಾಗಿರುವ ಸುಮಾರು 900 ವಲಸಿಗರನ್ನು ರಾಜ್ಯದ 6 ಸ್ಥಾನಬದ್ಧತೆ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿಸಿತು.







