ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಬಗ್ಗೆ ವರದಿ ನೀಡಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಮಾ.13: ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿಗರ ಬಗ್ಗೆ ಸಂಪೂರ್ಣ ವರದಿಯನ್ನು ನೀಡಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ತಮ್ಮ ಮೇಲೆ ದಾಖಲಾಗಿರುವ ಪ್ರಕರಣ ರದ್ದುಕೋರಿ ಎಚ್.ಬಿ.ಸಿಡ್ನೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು ವಾದಿಸಿ, ಆರೋಪಿ ಎಚ್.ಬಿ.ಸಿಡ್ನೈ ಸೇರಿದಂತೆ ಇನ್ನಿತರ ಆರೋಪಿಗಳು ಸೆಕ್ಷನ್ 14 ಮತ್ತು 14(ಸಿ) ವಿದೇಶಿ ಕಾಯ್ದೆಯನ್ನು ಉಲ್ಲಂಘಿಸಿ ರಾಜ್ಯದಲ್ಲಿ ನೆಲೆಸಿದ್ದಾರೆ. ಹೀಗಾಗಿ, ಎಚ್.ಬಿ.ಸಿಡ್ನೈ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕೆಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರ ಎಚ್.ಬಿ.ಸಿಡ್ನೈ ಪರ ವಾದಿಸಿದ ವಕೀಲರು, ನಮ್ಮ ಕಕ್ಷಿದಾರರು ವಿದ್ಯಾರ್ಥಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದು, ಅವರ ವೀಸಾದ ಅವಧಿ ಕೂಡ ಮುಗಿದು ಹೋಗಿದೆ. ಹೀಗಾಗಿ, ಅರ್ಜಿದಾರರು ತಮ್ಮ ದೇಶಕ್ಕೆ ಹೋಗಲು ಅನುಮತಿ ನೀಡಬೇಕು. ಹಾಗೂ ಅವರ ವಿರುದ್ಧ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿದ್ಯಾರ್ಥಿ ವೀಸಾವನ್ನು ಪಡೆದುಕೊಂಡು ಕರ್ನಾಟಕಕ್ಕೆ ಎಷ್ಟು ಜನರು ಬಂದಿದ್ದಾರೆ. ಹಾಗೂ ವೀಸಾ ಅವಧಿ ಮುಗಿದರೂ ಎಷ್ಟು ಜನರು ಇಲ್ಲಿಯೇ ನೆಲೆಸಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ವರದಿಯನ್ನು ನೀಡಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ







