ಮಹಿಳಾ ಸ್ಕ್ವಾಷ್ ಓಪನ್: ಜೋಶ್ನಾ ಕ್ವಾ.ಫೈನಲ್ಗೆ
ಕೈರೊ, ಮಾ.13: ಭಾರತದ ಸ್ಕ್ವಾಷ್ ಸ್ಟಾರ್ ಜೋಶ್ನಾ ಚಿನ್ನಪ್ಪ ಮಹಿಳೆಯರ ಬ್ಲಾಕ್ ಬಾಲ್ ಸ್ಕ್ವಾಷ್ ಓಪನ್ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಸ್ಕ್ವಾಷ್ ದಂತಕತೆ ನಿಕೊಲ್ ಡೇವಿಡ್ರನ್ನು ಮಣಿಸಿ ಶಾಕ್ ನೀಡಿದ್ದ ಚೆನ್ನೈ ಆಟಗಾರ್ತಿ ಜೋಶ್ನಾ ಮಂಗಳವಾರ ಇಂಗ್ಲೆಂಡ್ನ ಸಾರಾ-ಜಾನ್ ಪೆರ್ರಿ ವಿರುದ್ಧ 11-4, 6-11, 14-11, 11-9 ಗೇಮ್ಸ್ಗಳ ಅಂತರದಿಂದ ಜಯ ದಾಖಲಿಸಿದರು.
ಸುಮಾರು ಏಳು ವರ್ಷಗಳ ಬಳಿಕ ಜೋಶ್ನಾ ಅವರು 6ನೇ ಶ್ರೇಯಾಂಕದ ಸಾರಾ ವಿರುದ್ಧ ಮೊದಲ ಜಯ ದಾಖಲಿಸಿದರು. 2012ರ ಚೆನ್ನೈ ಓಪನ್ನಲ್ಲಿ ಕೊನೆಯ ಬಾರಿ ಸಾರಾರನ್ನು ಸೋಲಿಸಿದ್ದರು.
4 ಗೇಮ್ಸ್ಗಳ ಪಂದ್ಯದಲ್ಲಿ ಭಾರತದ ಆಟಗಾರ್ತಿ ಜೋಶ್ನಾ ಪಂದ್ಯದುದ್ದಕ್ಕೂ ಉತ್ತಮ ಹಿಡಿತ ಸಾಧಿಸಿದರು. ಮೊದಲ ಗೇಮ್ನ್ನು ಜೋಶ್ನಾ ವಶಪಡಿಸಿಕೊಂಡರು. ಸಾರಾ 2ನೇ ಗೇಮ್ನ್ನು ಗೆದ್ದುಕೊಂಡು ತಿರುಗೇಟು ನೀಡಿದರು. ಆ ಬಳಿಕ ಉಳಿದೆರಡು ಗೇಮ್ಗಳಲ್ಲಿ ಜಯ ಸಾಧಿಸಿದ ಜೋಶ್ನಾ ಪಂದ್ಯ ವಶಪಡಿಸಿಕೊಂಡರು. ಜೋಶ್ನಾ ಅಂತಿಮ-8ರ ಪಂದ್ಯದಲ್ಲಿ ನ್ಯೂಝಿಲೆಂಡ್ನಮೂರನೇ ಶ್ರೇಯಾಂಕದ ಜೊಲ್ಲಿ ಕಿಂಗ್ರನ್ನು ಮುಖಾಮುಖಿಯಾಗಲಿದ್ದಾರೆ.