ಮಸೂದ್ ಅಝರ್ನ ಸೊತ್ತುಗಳನ್ನು ಮುಟ್ಟುಗೋಲು ಹಾಕಲು ಫ್ರಾನ್ಸ್ ನಿರ್ಧಾರ
ಪ್ಯಾರಿಸ್, ಮಾ. 15: ಪಾಕಿಸ್ತಾನದ ಭಯೋತ್ಪಾದಕ ಗುಂಪು ಜೈಶೆ ಮುಹಮ್ಮದ್ ಸ್ಥಾಪಕ ಮಸೂದ್ ಅಝರ್ನ ಸೊತ್ತುಗಳನ್ನು ಮುಟ್ಟುಗೋಲು ಹಾಕಲು ಫ್ರಾನ್ಸ್ ನಿರ್ಧರಿಸಿದೆ ಎಂದು ಫ್ರಾನ್ಸ್ ಸರಕಾರ ಶುಕ್ರವಾರ ತಿಳಿಸಿದೆ.
ಭಯೋತ್ಪಾದನೆಯಲ್ಲಿ ಶಾಮೀಲಾಗಿರುವರೆಂದು ಶಂಕಿಸಲಾದ ಜನರನ್ನೊಳಗೊಂಡಿರುವ ಐರೋಪ್ಯ ಒಕ್ಕೂಟದ ಪಟ್ಟಿಯಲ್ಲಿ ಮಸೂದ್ನನ್ನು ಸೇರಿಸುವ ವಿಷಯವನ್ನು ಫ್ರಾನ್ಸ್ ಚರ್ಚಿಸಲಿದೆ ಎಂದು ಫ್ರಾನ್ಸ್ ಆಂತರಿಕ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ವಿದೇಶ ಸಚಿವಾಲಯಗಳು ಹೊರಡಿಸಿರುವ ಜಂಟಿ ಹೇಳಿಕೆಯೊಂದು ತಿಳಿಸಿದೆ.
ಜೈಶೆ ಮುಹಮ್ಮದ್ ಸೇರಿದಂತೆ ಭಾರತದಲ್ಲಿ ದಾಳಿಗಳನ್ನು ನಡೆಸುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಾಗತಿಕ ಶಕ್ತಿಗಳು ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿವೆ.
ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಸಿಆರ್ಪಿಎಫ್ನ ಕನಿಷ್ಠ 40 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ದಾಳಿಯ ಹೊಣೆಯನ್ನು ಜೈಶೆ ಮುಹಮ್ಮದ್ ವಹಿಸಿಕೊಂಡಿದೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ಯಾವತ್ತೂ ಭಾರತದ ಪರವಾಗಿ ನಿಂತಿದೆ, ಮುಂದೆಯೂ ನಿಲ್ಲಲಿದೆ ಎಂದು ಫ್ರಾನ್ಸ್ ಹೇಳಿದೆ.
‘‘ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾದ ವ್ಯಕ್ತಿಗಳು ಮತ್ತು ಗುಂಪುಗಳನ್ನೊಳಗೊಂಡ ಐರೋಪ್ಯ ಒಕ್ಕೂಟದ ಪಟ್ಟಿಯಲ್ಲಿ ಮಸೂದ್ ಅಝರ್ನನ್ನು ಸೇರಿಸುವ ಬಗ್ಗೆ ಐರೋಪ್ಯ ಭಾಗೀದಾರರೊಂದಿಗೆ ನಾವು ಚರ್ಚಿಸುತ್ತೇವೆ’’ ಎಂದು ಹೇಳಿಕೆ ತಿಳಿಸಿದೆ.
ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ, ಮಸೂದ್ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಫ್ರಾನ್ಸ್ ಹೊಸದಾಗಿ ಪ್ರಯತ್ನಗಳನ್ನು ಆರಂಭಿಸಿತ್ತು. ಅದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಇತರ ಖಾಯಂ ಸದಸ್ಯ ದೇಶಗಳಾದ ಬ್ರಿಟನ್ ಮತ್ತು ಅಮೆರಿಕಗಳು ಬೆಂಬಲ ನೀಡಿದ್ದವು. ಆದರೆ, ಭದ್ರತಾ ಮಂಡಳಿಯಲ್ಲಿ ಮಂಡಿಸಲಾದ ನಿರ್ಣಯಕ್ಕೆ ಗುರುವಾರ ಅಂತಿಮ ಕ್ಷಣದಲ್ಲಿ ಚೀನಾ ವೀಟೊ ಚಲಾಯಿಸುವ ಮೂಲಕ ತಡೆ ಒಡ್ಡಿರುವುದನ್ನು ಸ್ಮರಿಸಬಹುದಾಗಿದೆ.
ಮಸೂದ್ನನ್ನು ವಿಶ್ವಸಂಸ್ಥೆಯ ಉಗ್ರಪಟ್ಟಿಗೆ ಸೇರಿಸುವ ನಿರ್ಣಯಕ್ಕೆ ಚೀನಾ ತಡೆಯೊಡ್ಡುತ್ತಿರುವುದು ಇದು ನಾಲ್ಕನೇ ಬಾರಿ.