ನಿಮ್ಮ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿ ಎಂದು ವಾಟ್ಸ್ ಆ್ಯಪ್ ಸಹ ಸ್ಥಾಪಕ ಹೇಳಿದ್ದೇಕೆ ?
ಸ್ಯಾನ್ ಪ್ರಾನ್ಸಿಸ್ಕೊ: ವಾಟ್ಸ್ ಆ್ಯಪ್ ಸಹ ಸ್ಥಾಪಕ ಬ್ರಿಯಾನ್ ಆಕ್ಟನ್ ಸ್ಟ್ಯಾನ್ಫೋರ್ಡ್ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಫೇಸ್ ಬುಕ್ ಖಾತೆಗಳನ್ನು ಡಿಲೀಟ್ ಮಾಡಿ ಎಂದು ಕರೆ ನೀಡಿದ್ದಾರೆ.
ಇದಕ್ಕೆ ಅವರು ನೀಡಿರುವ ಕಾರಣ ಅತ್ಯಂತ ಗಂಭೀರವಾಗಿದೆ. ಫೇಸ್ ಬುಕ್ ಜಾಹೀರಾತುಗಳಿಗಾಗಿ ತನ್ನ ಬಳಕೆದಾರರ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಆಕ್ಟನ್ ಗಂಭೀರ ಆರೋಪ ಮಾಡಿದ್ದಾರೆ.
ಆಕ್ಟನ್ ಫೇಸ್ ಬುಕ್ ವಿರುದ್ಧ ಈ ರೀತಿ ಆರೋಪ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಖಾಸಗಿ ಮಾಹಿತಿ ಸೋರಿಕೆ ಕುರಿತ ಕೇಂಬ್ರಿಜ್ ಅನಾಲಿಟಿಕ ವಿವಾದ ಭುಗಿಲೆದ್ದ ಬಳಿಕ ಟ್ವಿಟ್ಟರ್ ನಲ್ಲಿ ಪ್ರಾರಂಭವಾದ #DeleteFacebook ಅಭಿಯಾನಕ್ಕೆ ಆಕ್ಟನ್ ಬೆಂಬಲ ಸೂಚಿಸಿದ್ದರು.
ಟ್ರಂಪ್ ಅಧ್ಯಕ್ಷೀಯ ಚುನಾವಣಾ ಪ್ರಚಾರ ತಂಡ ಕೇಂಬ್ರಿಜ್ ಅನಾಲಿಟಿಕ ಮೂಲಕ 87 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಅಕ್ರಮವಾಗಿ ಪಡೆದಿತ್ತು ಎಂಬ ಆರೋಪ ಬಂದಿತ್ತು.
2014 ರಲ್ಲಿ ಜಾನ್ ಕುಮ್ ಜೊತೆ ವಾಟ್ಸ್ ಆ್ಯಪ್ ಅನ್ನು ಫೇಸ್ ಬುಕ್ ಗೆ ಮಾರಿದ ಆಕ್ಟನ್ ಈಗ ಅದರ ಪ್ರತಿಸ್ಪರ್ಧಿ ಮೆಸೇಜಿಂಗ್ ಆಪ್ ಒಂದನ್ನು ನಡೆಸುತ್ತಿದ್ದಾರೆ.
ವಾಟ್ಸ್ ಆ್ಯಪ್ ನಲ್ಲಿ ಜಾಹೀರಾತಿಗೆ ಅವಕಾಶ ನೀಡುವುದನ್ನು ಆಕ್ಟನ್ ತೀವ್ರವಾಗಿ ವಿರೋಧಿಸಿದ್ದರು. ಅದರ ಬದಲಿಗೆ ಪ್ರತಿ ವರ್ಷಕ್ಕೆ ಒಂದು ಡಾಲರ್ ನಂತೆ ಬಳಕೆದಾರರಿಂದ ಪಡೆಯಬಹುದು ಎಂದು ಅವರು ಸಲಹೆ ನೀಡಿದ್ದರು.