ಉಗ್ರ ಬ್ರೆಂಟನ್ ವಿರುದ್ಧ ಹತ್ಯಾಕಾಂಡದ ಆರೋಪ ದಾಖಲಿಸಿದ ಕೋರ್ಟ್
ಮಸೀದಿ ಮೇಲೆ ದಾಳಿ
ಕ್ರೈಸ್ಟ್ಚರ್ಚ್,ಮಾ.16: ನ್ಯೂಝಿಲ್ಯಾಂಡ್ನ ಕ್ರೈಸ್ಟ್ಚರ್ಚ್ ನಗರದ ಎರಡು ಮಸೀದಿಗಳಲ್ಲಿ ಭೀಕರ ಗುಂಡಿನ ದಾಳಿ ನಡೆಸಿ, 49 ಮಂದಿಯನ್ನು ಹತ್ಯೆಗೈದ ಬಿಳಿಜನಾಂಗೀಯವಾದಿ ಉಗ್ರಗಾಮಿ ಬ್ರೆಂಟನ್ ಟ್ಯಾರಾಂಟ್ನ ವಿರುದ್ಧ ಶನಿವಾರ ಸ್ಥಳೀಯ ನ್ಯಾಯಾಲಯವು ಕೊಲೆ ಆರೋಪವನ್ನು ಹೊರಿಸಿದೆ.
ಆಸ್ಟ್ರೇಲಿಯ ಸಂಜಾತ 28 ವರ್ಷದ ಬ್ರೆಂಟನ್ ಟ್ಯಾರಂಟ್ಗೆ ಕೈಕೋಳ ತೊಡಿಸಿ ನ್ಯಾಯಾಲಯದ ಕಟಕಟೆಗೆ ತರಲಾಗಿತ್ತು. ಇಂದು ನ್ಯಾಯಾಧೀಶರು ಆತನ ವಿರುದ್ಧ ಕೊಲೆ ಆರೋಪವನ್ನು ಓದಿ ಹೇಳಿದರು. ಮುಂದಿನ ವಿಚಾರಣೆಯ ವೇಳೆ ಆತನ ವಿರುದ್ಧ ಇನ್ನಷ್ಟು ಆರೋಪಗಳು ದಾಖಲಾಗುವ ನಿರೀಕ್ಷೆಯಿದೆ.
ಮಾಜಿ ಫಿಟ್ನೆಸ್ ಶಿಕ್ಷಕ ಹಾಗೂ ಸ್ವಘೋಷಿತ ಫ್ಯಾಶಿಸ್ಟ್ ತೀವ್ರವಾದಿಯಾದ ಬ್ರೆಂಟಾನ್ ಟ್ಯಾರಂಟ್ನನ್ನು ಸಂಕ್ಷಿಪ್ತ ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ, ನ್ಯಾಯಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಸಶಸ್ತ್ರಧಾರಿ ಪೊಲೀಸರಿಂದ ಸುತ್ತುವರಿಯಲ್ಪಟ್ಟಿದ್ದ ಬ್ರೆಂಟಾನ್, ಬಿಳಿಯಜನಾಂಗೀಯ ವಾದಿ ಶಕ್ತಿಗಳು ಬಳಸುವ ಓಕೆ (ಹೆಬ್ಬೆರಳು ಹಾಗ ತೋರುಬೆರಳನ್ನು ವರ್ತುಲಾಕಾರವಾಗಿ ಜೋಡಿಸುವುದು) ಸಂಕೇತವನ್ನು ಪ್ರದರ್ಶಿಸಿದ. ಜಾಮೀನು ಬಿಡುಗಡೆಗೆ ಮನವಿಯನ್ನು ಸಲ್ಲಿಸದಿರುವ ಆತನಿಗೆ ನ್ಯಾಯಾಲಯ ಪೊಲೀಸ್ ಕಸ್ಟಡಿ ವಿಧಿಸಿದೆ ಹಾಗೂ ಮುಂದಿನ ವಿಚಾರಣೆಯನ್ನು ಎಪ್ರಿಲ್ 5ಕ್ಕೆ ಮುಂದೂಡಿದೆ.
ಈ ಮಧ್ಯೆ ಕ್ರೈಸ್ಟ್ಚರ್ಚ್ ಅವಳಿ ಮಸೀದಿ ಶೂಟೌಟ್ನಲ್ಲಿ ಗಾಯಗೊಂಡ 38 ಮಂದಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಂಡೇಟಿನ ಗಾಯಗಳಾದವರಲ್ಲಿ ಎರಡು ವರ್ಷದ ಬಾಲಕ ಹಾಗೂ ನಾಲ್ಕು ವರ್ಷದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆಯೆಂದು ತಿಳಿದುಬಂದಿದೆ.