ನಟಿ ಪೂಜಾಗಾಂಧಿ ವಿರುದ್ಧ ದೂರು ದಾಖಲು
ಬೆಂಗಳೂರು, ಮಾ.19: ಪ್ರತಿಷ್ಠಿತ ಖಾಸಗಿ ಹೊಟೇಲ್ವೊಂದರಲ್ಲಿ ಕೊಠಡಿ ಪಡೆದು, ಬಾಡಿಗೆ ಪಾವತಿ ಮಾಡದ ಆರೋಪದಡಿ ಸಿನಿಮಾ ನಟಿ ಪೂಜಾ ಗಾಂಧಿ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಲಾಗುತ್ತಿದೆ.
ದೂರು ಹಿನ್ನೆಲೆಯಲ್ಲಿ ಪೊಲೀಸರು ಪೂಜಾಗಾಂಧಿ ವಿರುದ್ಧ ಎನ್ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೂಜಾ ಗಾಂಧಿ ಒಟ್ಟು 4.5 ಲಕ್ಷ ರೂ. ನಗದು ಪಾವತಿ ಮಾಡದೆ, ಪರಾರಿಯಾಗಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದ್ದು, ಈ ಸಂಬಂಧ ಪೊಲೀಸರು, ನಟಿಯನ್ನು ಠಾಣೆಗೆ ಕರೆದು ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. ಬಳಿಕ ಪೂಜಾಗಾಂಧಿ ಪೊಲೀಸರ ಸಮ್ಮುಖದಲ್ಲಿಯೇ 2 ಲಕ್ಷ ರೂ. ನೀಡಿದ್ದಾರೆ ಎನ್ನಲಾಗಿದೆ.
ನಾನು ಹೋಗಿಲ್ಲ...!
ನಾನು ಯಾವುದೇ ಹೊಟೇಲ್ ನ ಬಾಕಿ ಉಳಿಸಿಕೊಂಡಿಲ್ಲ, ಪಾವತಿಸಬೇಕಾಗಿಯೂ ಇಲ್ಲ. ಅಷ್ಟಕ್ಕೂ ನಾನು ಹೊಟೇಲ್ ಕೊಠಡಿ ಏಕೆ ಪಡೆಯಲಿ. ಅದರ ಅಗತ್ಯ ನನಗಿಲ್ಲ.
-ಪೂಜಾಗಾಂಧಿ, ನಟಿ
ಏನಿದು ಆರೋಪ?
ನಟಿ ಪೂಜಾಗಾಂಧಿ ಅವರು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆ ಬೆಂಗಳೂರಿನ ಲಲಿತ್ ಅಶೋಕ್ ಹೊಟೇಲ್ನಲ್ಲಿ 1 ವರ್ಷ ಕೊಠಡಿಯೊಂದನ್ನು ಬಾಡಿಗೆ ಪಡೆದಿದ್ದರು. ಕಳೆದ 2016ರ ಏಪ್ರಿಲ್ ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷದ ಬಾಡಿಗೆ ಒಟ್ಟು 26 ಲಕ್ಷ ಆಗಿತ್ತು. ಇದರಲ್ಲಿ 22 ಲಕ್ಷ ರೂಪಾಯಿ ಮಾತ್ರ ಪಾವತಿಸಿ ಬಾಕಿ ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಹೊಟೇಲ್ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ ಎನ್ನುವ ಆರೋಪ ಕೇಳಿಬಂದಿದೆ.