ನಮ್ಮ ಬಾಯಿ ಆರೋಗ್ಯವಾಗಿರಲಿ
ಇಂದು ವಿಶ್ವ ಬಾಯಿ ಆರೋಗ್ಯ ದಿನ
ಪ್ರತಿ ವರ್ಷ ಮಾರ್ಚ್ 20ರಂದು ವಿಶ್ವ ಬಾಯಿಯ ಆರೋಗ್ಯ ದಿನ ಎಂದು ಆಚರಿಸಲಾಗುತ್ತಿದ್ದು, ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಬಾಯಿಯ ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಧನಾತ್ಮಕವಾದ ವಿಚಾರಧಾರೆಗಳನ್ನು ಮೂಡಿಸಲು ಮತ್ತು ಬಾಯಿಯ ಆರೋಗ್ಯದಿಂದ, ದೇಹದ ಆರೋಗ್ಯದ ಮತ್ತು ವ್ಯಕ್ತಿಯ ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳ ಬಗ್ಗೆ ಹೊಸ ಚಿಂತನೆಗಳನ್ನು ಮೂಡಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಈ ಆಚರಣೆ 2007ರಲ್ಲಿ FDI (ಅಂತರ್ರಾಷ್ಟ್ರೀಯ ದಂತ ಸಂಘ) ಆಚರಣೆಗೆ ತಂದಿತು. FDI ಇದರ ಜನಕರಾದ ಚಾರ್ಲ್ ಗೊಡನ್ ಅವರು ಹುಟ್ಟಿದ ದಿನವಾದ ಸೆಪ್ಟಂಬರ್ 12ರಂದು ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆದರೆ 2013ರಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ವಿಶ್ವ ಬಾಯಿ ಆರೋಗ್ಯ ದಿನವನ್ನು ಮಾರ್ಚ್ 20ಕ್ಕೆ ಬದಲಾಯಿಸಲಾಯಿತು. 2019ರ ವಿಶ್ವ ಬಾಯಿ ಆರೋಗ್ಯ ದಿನಾಚರಣೆಯ ಧೈೀಯ ವಾಕ್ಯ ‘‘ಬುದ್ಧ್ಧಿವಂತರಾಗಿ ಬದುಕಿ ಬಾಯಿ ಆರೋಗ್ಯ ರಕ್ಷಿಸಿ’’ (Live Mouth Smart)
ಮುಖ ಮನಸ್ಸಿನ ಕನ್ನಡಿ, ಸುಂದರವಾದ ಮುಖದಲ್ಲಿ ಅಂದವಾದ ದಂತ ಪಂಕ್ತಿಗಳಿಂದ ಕೂಡಿದ ಶುಭ್ರ, ನಿಷ್ಕಲ್ಮಶ ನಗು ಮತ್ತು ಆರೋಗ್ಯವಂತ ಬಾಯಿ ದೇಹದ ಅರೋಗ್ಯದ ದಿಕ್ಸೂಚಿ. ಪ್ರತಿಯೊಬ್ಬ ಮನುಷ್ಯನೂ ಬಯಸುವುದು ಕೂಡಾ ಸುಂದರ ನಿಷ್ಕಲ್ಮಶ ನಗುವನ್ನೇ. ಹಲ್ಲುಗಳು ವಜ್ರಕ್ಕಿಂತಲೂ ಅಮೂಲ್ಯವಾದ ಆಸ್ತಿ. ನಮ್ಮ ಹಲ್ಲಿನ ಆರೈಕೆಯು ನಮ್ಮ ಶರೀರದ ಸಾಮಾನ್ಯ ಆರೋಗ್ಯದ ಒಂದು ಪ್ರಮುಖ ಅಂಗವಾಗಿದೆ. ಹಲ್ಲಿನ ಆರೋಗ್ಯವನ್ನು ನಿರ್ಲಕ್ಷಿಸಿದರೆ ನಮ್ಮ ಸಾಮಾನ್ಯ ಆರೋಗ್ಯದ ಮೇಲೂ ಅದರ ದುಷ್ಪರಿಣಾಮವಾಗಬಹುದು. ಆದ್ದರಿಂದ ಲ್ಲುಗಳ ಆರೈಕೆಯನ್ನು ಚೆನ್ನಾಗಿ ಮಾಡಿದರೆ ಅವು ನಮ್ಮ ಆರೋಗ್ಯದ ಆರೈಕೆ ಮಾಡುತ್ತದೆ. ಸುಂದರವಾದ ಸದೃಢವಾದ ಹಲ್ಲುಗಳು ಆಹಾರವನ್ನು ಸರಿಯಾಗಿ ಜಗಿಯಲು ಅನುಕೂಲ ಮಾಡಿಕೊಟ್ಟು ದೇಹದ ಪಚನ ಕ್ರಿಯೆಗೆ ಸಹಾಯ ಮಾಡುತ್ತವೆ. ಅಲ್ಲದೇ ಸದೃಢವಾದ ಆರೋಗ್ಯವಂತ ಹಲ್ಲುಗಳು ಮನುಷ್ಯನಿಗೆ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು, ಗೆಡ್ಡೆಗೆಣಸುಗಳನ್ನು, ನಾರುಯುಕ್ತ, ಪೌಷ್ಟಿಕಾಂಶಯುಕ್ತ ಹಸಿ ತರಕಾರಿ, ಹಣ್ಣು- ಹಂಪಲುಗಳನ್ನು ತಿನ್ನಲು ಸಹಾಯ ಮಾಡಿ, ದೇಹದ ಸ್ವಾಸ್ಥ ಕಾಪಾಡುತ್ತವೆೆ.
ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕ ಆಹಾರ ಬಾಯಿಯ ಮೂಲಕವೇ ಜಠರವನ್ನು ತಲುಪಬೇಕು. ತಿಂದ ಆಹಾರವನ್ನು ದೇಹ ಜೀರ್ಣಿಸಿಕೊಳ್ಳಬೇಕಾದರೆ ಅದನ್ನು ಸರಿಯಾಗಿ ಜಗಿಯಬೇಕು. ಈ ಕೆಲಸಕ್ಕೆ ಸ್ವಸ್ಥವಾದ ಹಲ್ಲುಗಳು ಅತೀ ಅಗತ್ಯ. ಹಲ್ಲುಗಳು ಮಾತನಾಡಲು ಕೂಡಾ ಆವಶ್ಯಕ. ಕೃತಕ ಹಲ್ಲುಗಳಿಂದ ಸ್ಪಷ್ಟ ಉಚ್ಚಾರದಲ್ಲಿ ಮೊದಮೊದಲು ಕಷ್ಟವಾಗಬಹುದು. ಹಲ್ಲುಗಳಿಲ್ಲದಿದ್ದರೆ ಕೆಲವು ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದು ಅಸಾಧ್ಯ. ಹಲ್ಲುಗಳು ಮುಖದ ಅಂದವನ್ನು ಹೆಚ್ಚಿಸುವ ಜೊತೆಗೆ ವ್ಯಕ್ತಿಯ ಆತ್ಮವಿಶ್ವಾಸಕ್ಕೂ ಹೆಚ್ಚಿನ ಬಲ ನೀಡುತ್ತವೆ. ಆದ್ದರಿಂದಲೇ ಹಲ್ಲಿನ ಜೋಪಾನವೇ ಸುಖ ಜೀವನಕ್ಕೆ ಸೋಪಾನವಾಗುತ್ತದೆ. ಒಟ್ಟಿನಲ್ಲಿ ಸುಂದರವಾದ ಸದೃಢವಾದ ಹಲ್ಲುಗಳು, ಮನುಷ್ಯನ ಆತ್ಮವಿಶ್ವಾಸದ ಪ್ರತೀಕ. ಸುಂದರವಾಗಿ ನಗಲು, ಆಹಾರವನ್ನು ಜಗಿಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ದೇಹದ ಆರೋಗ್ಯದ ಸಮತೋಲನವನ್ನು ಕಾಯ್ದಕೊಳ್ಳಲು ಹಲ್ಲಿನ ಆರೋಗ್ಯ ಅತೀ ಆವಶ್ಯಕ.
ಬಾಯಿಯಲ್ಲಿ ಕಂಡು ಬರುವ ರೋಗಗಳು:
ಬಾಯಿಯಲ್ಲಿ ನೂರಾರು ಬಗೆಯ ರೋಗಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಬಹುದು. ಕೆಲವೊಮ್ಮೆ ಹಲವಾರು ರೋಗಗಳು ತಮ್ಮ ಇರುವಿಕೆಯನ್ನು ಮುಂದುವರಿದ ಹಂತದಲ್ಲಿ ಬಾಯಿಯಲ್ಲ್ಲಿ ಪ್ರಕಟಿಸುತ್ತವೆ. ಈ ಕಾರಣದಿಂದಲೇ ಬಾಯಿಯನ್ನು ವೈದ್ಯರ ಮುಖ ಕನ್ನಡಿ ಎಂದು ಕರೆಯುತ್ತಾರೆ. ಬಾಯಿಯಲ್ಲಿ ಲಕ್ಷಾಂತರ ಬ್ಯಾಕ್ಟಿರಿಯಾಗಳು ಮನೆ ಮಾಡಿರುತ್ತವೆ ಮತ್ತು ದೇಹದ ಆರೋಗ್ಯದಲ್ಲಿ ಸ್ವಲ್ಪಏರು ಪೇರಾದರೂ ಬಾಯಿಯ ತೆಳುವಾದ ಪದರುಗಳಲ್ಲಿ, ನಾಲಗೆಯ ಮೇಲ್ಭಾಗದಲ್ಲಿ ನಿಖರವಾಗಿ ಗೋಚರಿಸುತ್ತದೆ. ವಿಟಮಿನ್ ಸಿ ಕೊರತೆ ಇದ್ದಲ್ಲಿ ಬಾಯಿಯಲ್ಲಿ ಹುಣ್ಣಾಗುವುದು, ವಸಡಿನಲ್ಲಿ ರಕ್ತ ಬರುವುದು ಸರ್ವೇಸಾಮಾನ್ಯ. ಅದೇ ರೀತಿ ವಿಟಮಿನ್ ಡಿ6 ಕೊರತೆ ಇದ್ದಲ್ಲಿ ನಾಲಗೆ ಬೋಳಾಗಿರುತ್ತದೆ. ರಕ್ತದ ಕ್ಯಾನ್ಸರ್ ಅಥವಾ ಲ್ಯುಕೇಮಿಯಾ ಎಂಬ ರೋಗದಲ್ಲಿ ಬಾಯಿ, ವಸಡಿನಲ್ಲಿ ರಕ್ತ ಬರುತ್ತದೆ. ರಕ್ತದಲ್ಲಿ ಪ್ಲೇಟ್ಲೆಟ್ಗಳ ಸಂಖ್ಯೆ ಕಡಿಮೆ ಆದಾಗಲೂ ವಸಡಿನಲ್ಲಿ ರಕ್ತ ಎಸರುತ್ತದೆ. ಉದಾಹರಣೆ ಡೆಂಗ್ ಜ್ವರ ಅಥವಾ ಚಿಕುನ್ಗುನ್ಯಾ ರೋಗದಲ್ಲಿ ಈ ರೀತಿ ವಸಡಿನಲ್ಲಿ ರಕ್ತ ಒಸರುತ್ತದೆ. ತಂಬಾಕು ವ್ಯಸನಿಗಳಲ್ಲಿ ಬಾಯಿ ಉರಿಯುವುದು, ಬಾಯಿಯಲ್ಲಿ ಬಿಳಿ ಕೆಂಪು ಕಲೆಗಳು ಕಂಡು ಬರುತ್ತವೆ ಅಥವಾ ಬಾಯಿಯಲ್ಲಿ ಒಣಗದೇ ಇರುವ ಹುಣ್ಣುಗಳು ಮತ್ತು ಗಟ್ಟಿಯಾದ ಬಿಳಿ ಬ್ಯಾಂಡ್ಗಳು ಕಂಡು ಬರುತ್ತದೆ. ಬಾಯಿಯ ಅಂಗಳದ ಭಾಗದಲ್ಲಿ ಮೇಲ್ಪದರ ಒಣಗಿ ದೊರಗಾಗಿರುತ್ತದೆ. ಏಡ್ಸ್ ರೋಗಿಗಳಲ್ಲಿ ಬಾಯಿಯಲ್ಲಿ ಪದೇ ಪದೇ ಹುಣ್ಣು ಉಂಟಾಗುವುದು. ಬಾಯಿಯಲ್ಲಿ ಗಡ್ಡೆ ಬೆಳೆಯುವುದು, ಒಸಡುಗಳಲ್ಲಿ ಗಡ್ಡೆ ಬೆಳೆಯುವುದು ಕಂಡು ಬರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ ಹಲ್ಲಿನ ಒಸಡುಗಳ ಸುತ್ತ ಕೀವು ತುಂಬಿಕೊಂಡು ಬಾಯಿ ದುರ್ಗಂಧ ಬರುತ್ತದೆ. ಅಧಿಕ ರಕ್ತದೊತ್ತಡ ಇರುವ ರೋಗಿಗಳಲ್ಲಿ ಮತ್ತು ಅಪಸ್ಮಾರ ರೋಗದಿಂದ ಬಳಲುತ್ತಿರುವ ರೋಗಿಗಳಲ್ಲಿ ಅವರು ತೆಗೆದುಕೊಳ್ಳುವ ಔಷಧಿಯ ಅಡ್ಡ ಪರಿಣಾಮದಿಂದಾಗಿ ಬಾಯಿಯಲ್ಲಿ ವಸಡುಗಳು ಅಡ್ಡಾದಿಡ್ಡಿಯಾಗಿ ಬೆಳೆಯುತ್ತದೆ. ಮತ್ತು ಕೆಲವೊಮ್ಮೆ ಹಲ್ಲುಗಳೇ ಕಾಣಿಸದಷ್ಟು ರೀತಿಯಲ್ಲಿ ಒಸಡುಗಳು ಬೆಳೆಯುತ್ತವೆ. ಇನ್ನು ಮಧು ಮೇಹ ರೋಗಿಗಳಲ್ಲಿ ಬಾಯಿ ವಿಪರೀತ ವಾಸನೆ ಇರುತ್ತದೆ. ಎಲ್ಲಾ ಹಲ್ಲುಗಳು ಅಲುಗಾಡುತ್ತಿರುತ್ತವೆ. ಹಲ್ಲಿನ ಸುತ್ತಲಿನ ಒಸಡಿನಲ್ಲಿ ಕೀವು ತುಂಬಿಕೊಂಡು ಹಲ್ಲಿನ ಸುತ್ತಲಿರುವ ಎಲುಬುಗಳು ಕರಗಿ ಹೋಗುತ್ತವೆ. ರಕ್ತ ಹೀನತೆಯಿಂದ ಬಳಲುತ್ತಿರುವವರಲ್ಲಿ ಬಾಯಿಯಲ್ಲಿನ ನಾಲಗೆಯ ಕೆಳ ಭಾಗ ಬಿಳಿಚಿಕೊಂಡಿರುತ್ತದೆ ಮತ್ತು ನಾಲಗೆಯ ಮೇಲ್ಭಾಗ ಬೋಳಾಗಿರುತ್ತದೆ. ವಿಪರೀತ ವೈರಾಣು ಜ್ವರ ಬಂದಾಗಲೂ ಬಾಯಿಯಲ್ಲಿನ ಪದರುಗಳು ಬಿಳಿಚಿಕೊಂಡಿರುತ್ತದೆ. ದೇಹಕ್ಕೆ ನಿರ್ಜಲೀಕರಣ ಉಂಟಾದಾಗಲೂ ಬಾಯಿ ಒಣಗಿ ಹೋಗುತ್ತದೆ, ಇನ್ನು ಕ್ಯಾನ್ಸರ್ ರೋಗಕ್ಕೆ ವಿಕಿರಣ ಚಿಕಿತ್ಸೆ ನೀಡಿದಲ್ಲಿ ಬಾಯಿಯಲ್ಲಿ ಜೊಲ್ಲುರಸ ಉತ್ಪಾದನೆ ಕಡಿಮೆಯಾಗಿ ಬಾಯಿ ಒಣಗುತ್ತದೆ. ಹೀಗೆ ಬಾಯಿಯೊಳಗೆ ತೊಂದರೆ ಉಂಟಾದಾಗ ಹಲ್ಲಿನಲ್ಲಿ ದಂತ ಕ್ಷಯ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ ಬಾಯಿ ಎನ್ನುವುದು ಬ್ಯಾಕ್ಟಿರೀಯಾಗಳ ಗುಂಡಿಯಾಗಿದ್ದು, ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋದಾಗಲೆಲ್ಲಾ ಈ ನಿರುಪದ್ರವಿ ಜೀವಿಗಳು ವಿಜೃಂಭಿಸಿ ಬಾಯಿಯಲ್ಲಿ ಹತ್ತು ಹಲವಾರು ರೋಗಗಳಿಗೆ ಮುನ್ನುಡಿ ಬರೆಯುತ್ತವೆ. ನಮ್ಮ ದೇಹದ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಂಡಲ್ಲಿ ಬಾಯಿಯಲ್ಲಿ ಉಂಟಾಗುವ ಈ ಎಲ್ಲಾ ತೊಂದರೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಹಲ್ಲಿನ ರಕ್ಷಣೆಗೆ ಹತ್ತು ಹಲವು ಮಾರ್ಗಗಳು
ನೈಸರ್ಗಿಕ ಹಲ್ಲನ್ನು ಉಳಿಸಿಕೊಳ್ಳಲು ಕೆಲವೊಂದು ಕ್ರಮಗಳನ್ನು ಚಾಚೂತಪ್ಪದೆ ಅನುಸರಿಸಬೇಕು.
ಹಲ್ಲುಗಳನ್ನು ಕಡೇ ಪಕ್ಷ ದಿನಕ್ಕೆರಡು ಬಾರಿ ಬ್ರಶ್ ಮಾಡಿ. ಬ್ರಶ್ ಮಾಡಬೇಕಾದ ಕನಿಷ್ಠ ಅವಧಿ ಎರಡು ನಿಮಿಷ. ಸರಿಯಾದ ಕ್ರಮದಲ್ಲಿ ಬ್ರಶ್ ಮಾಡುವುದು ಅತೀ ಆವಶ್ಯಕ. ಗೊತ್ತಿಲ್ಲದಿದ್ದರೆ ಸಮೀಪದ ದಂತ ವೈದ್ಯರಲ್ಲಿ ವಿಚಾರಿಸಿ. ಊಟ ತಿಂಡಿಯ ಬಳಿಕ ಬ್ರಶ್ ಮಾಡಿದರೆ ಒಳ್ಳೆಯದು. ಸಾಧ್ಯವಾಗದಿದ್ದಲ್ಲಿ ರಾತ್ರಿಯಂತೂ ಮಲಗುವ ಮುನ್ನ ಹಲ್ಲುಜ್ಜಿ ಮಲಗಿ.
- ಹಲ್ಲು ಉಜ್ಜುವ ಅವಧಿಗಿಂತ ಕ್ರಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ಸಾಮಾನ್ಯವಾಗಿ ಬ್ರಶ್ಗೆ ಮೇಲೆ ಕೆಳಗೆ ಚಾಲನೆ ನೀಡಬೇಕು. ಬಹಳ ಜೋರಾಗಿ ಹಲ್ಲುಜ್ಜಬಾರದು. ಅತಿಯಾದ ಶಕ್ತಿ ಬಲ ಹಾಕಿ ಹಲ್ಲುಜ್ಜುವುದರಿಂದ ಹಲ್ಲಿಗೆ ಹಾನಿಯಾಗಬಹುದು.
- ಬ್ರಶ್ಗಳನ್ನು ಆರಿಸುವಾಗ ಜಾಗ್ರತೆವಹಿಸಿ. ಉಚಿತವಾಗಿ ಸಿಕ್ಕಿದೆ ಎಂದು ಉಪಯೋಗಿಸಬೇಡಿ. ಸ್ವಲ್ಪಬಾಗಿದ ಬ್ರಶ್ನಿಂದ ದವಡೆ ಹಲ್ಲುಗಳನ್ನು ಚೆನ್ನಾಗಿ ಬ್ರಶ್ ಮಾಡಬಹುದು. ಬ್ರಶ್ಗಳಲ್ಲಿ ಮೃದು, ಮೀಡಿಯಂ ಮತ್ತು ಹಾರ್ಡ್ ಎಂದು ಮೂರು ವಿಧಗಳಿವೆ. ದಯವಿಟ್ಟು ಮೆದು (Soft) ಅಥವಾ ಮೀಡಿಯಮ್ ಬ್ರಶ್ಗಳನ್ನೇ ಉಪಯೋಗಿಸಿ. ಕಠಿಣ (Hard) ಬ್ರಶ್ಗಳಿಂದ ಹಲ್ಲು ಸವೆಯುವುದು ಖಚಿತ.
- ಕನಿಷ್ಠ ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾಯಿಸಿ. ಟಿ.ವಿ/ ದಿನ ಪತ್ರಿಕೆಗಳಲ್ಲಿ ಬರುವ ಜಾಹೀರಾತಿಗೆ ಮಾರು ಹೋಗಿ ಬ್ರಶ್ ಅಥವಾ ಟೂತ್ಪೇಸ್ಟ್ ಖರೀದಿಸಬೇಡಿ. ನಿಮ್ಮ ಆವಶ್ಯಕತೆಗಳಿಗೆ ಅನುಗುಣವಾಗಿ ದಂತ ವೈದ್ಯರ ಸಲಹೆ ಪಡೆದು ಬ್ರಶ್ ಹಾಗೂ ದಂತಚೂರ್ಣ ಖರೀದಿಸಿ.
- ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರಕುವ ದಂತ ಚೂರ್ಣಗಳು ಪ್ಲೋರೈಡ್ನಿಂದ ಕೂಡಿದ್ದು ಹುಳುಕಾಗದಂತೆ ಹಲ್ಲನ್ನು ಕಾಪಾಡುತ್ತದೆ. ಜಾಹೀರಾತು ನೋಡಿ ದಯವಿಟ್ಟು ದಂತ ಚೂರ್ಣ ಉಪಯೋಗಿಸಬೇಡಿ. ಫಾರ್ಮಸಿಗಳಲ್ಲಿ ದೊರೆಯುವ ಮೆಡಿಕೇಟೇಡ್ (ಮದ್ದುಯುಕ್ತ) ದಂತ ಚೂರ್ಣಗಳನ್ನು ದಂತ ವೈದ್ಯರು ಸೂಚಿಸಿದರೆ ಮಾತ್ರ ಖರೀದಿಸಿ ಅನಗತ್ಯ ಉಪಯೋಗಿಸಬೇಡಿ.
- ಪದೇ ಪದೇ ಬ್ರಶ್ ಹಾಗೂ ಪೇಸ್ಟ್ ಬದಲಾಯಿಸಬೇಡಿ. ಇದರಿಂದ ಬಾಯಿಯಲ್ಲಿ ಹುಣ್ಣು, ಅಲರ್ಜಿ, ತುರಿಕೆ ಬರಬಹುದು. ಬ್ರಾಂಡ್ ಅಥವಾ ಕಂಪೆನಿ ಬದಲಾಯಿಸುವಾಗ ದಂತ ವೈದ್ಯರ ಸಲಹೆ ಪಡೆಯಿರಿ. ಹಲ್ಲು ಬೆಳ್ಳಗಾಗಿಸುವ ಯಾವುದೇ ರಾಸಾಯನಿಕಗಳನ್ನು ದಯವಿಟ್ಟು ದಂತ ವೈದ್ಯರ ಸಲಹೆ ಇಲ್ಲದೆ ಉಪಯೋಗಿಸಬೇಡಿ. ಇದರಲ್ಲಿ Abrasives ಜಾಸ್ತಿ ಇರುವುದರಿಂದ ಹಲ್ಲು ಸವೆಯುತ್ತದೆಯೇ ಹೊರತು ಹಲ್ಲು ಬಿಳಿಯಾಗುವುದಿಲ್ಲ.
- ಬ್ರಶ್ ಮಾಡಿದ ಬಳಿಕ ಕನಿಷ್ಠ ಪಕ್ಷ 2 ರಿಂದ ಮೂರು ನಿಮಿಷ ಬೆರಳಿನಿಂದ ನಿಮ್ಮ ವಸಡುಗಳನ್ನು ಗಟ್ಟಿಯಾಗಿ ತಿಕ್ಕಿ ಮಸಾಜ್ ಮಾಡಬೇಕು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುವುದು ಮತ್ತು ವಸಡಿನ ಆರೋಗ್ಯವನ್ನು ವೃದ್ಧಿಸುತ್ತದೆೆ.
- ಎರಡು ಊಟದ ಮಧ್ಯೆ ಸಿಹಿ ಪದಾರ್ಥ ಅಂಟಾದ ಪದಾರ್ಥ (ಚಾಕೊಲೇಟ್) ಇತ್ಯಾದಿಗಳನ್ನು ಸೇವಿಸಬೇಡಿ. ಅನಿವಾರ್ಯವಾದಲ್ಲಿ ತಿಂದ ಬಳಿಕ ಚೆನ್ನಾಗಿ ಹಲ್ಲು ಉಜ್ಜಬೇಕು. ಬಾಯಿಯನ್ನು ಪ್ರತಿ ಸಲ ಆಹಾರ ತಿಂದ ಬಳಿಕ ನೀರಿನಿಂದ ಚೆನ್ನಾಗಿ ತೊಳೆಯಿರಿ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚನೆಯ ನೀರಿಗೆ ಉಪ್ಪು ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸುವುದು ಸೂಕ್ತ.
- ವಿಟಮಿನ್ ಮತ್ತು ಖನಿಜಾಂಶಗಳುಳ್ಳ ಸತ್ವಯುಕ್ತ ಆಹಾರವನ್ನು ಸೇವಿಸಿರಿ. ಕಬ್ಬು, ಸೇಬು, ಕ್ಯಾರೆಟ್, ಮೂಲಂಗಿ ಇತ್ಯಾದಿ ನಾರುಯುಕ್ತ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿದರೆ ಹಲ್ಲುಗಳು ಸದೃಢವಾಗುತ್ತವೆ. ಸೌತೆಕಾಯಿ, ಟೊಮೆಟೊ ಇತ್ಯಾದಿ ಹಸಿ ತರಕಾರಿಗಳನ್ನು ಜಾಸ್ತಿ ಉಪಯೋಗಿಸಿದ್ದಲ್ಲಿ ಹಲ್ಲಿನ ಆರೋಗ್ಯದ ಜೊತೆ ದೇಹದ ಆರೋಗ್ಯವನ್ನೂ ವೃದ್ಧಿಸುತ್ತದೆ.
- ನಿಮ್ಮ ದಂತ ವೈದ್ಯರನ್ನು ನಿಯಮಿತವಾಗಿ 6 ತಿಂಗಳಿಗೊಮ್ಮೆ ಯಾದರೂ ಭೆೇಟಿ ಮಾಡಿ. ಇದು ನಿಮ್ಮ ತೊಂದರೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲು ಹಾಗೂ ಗುಣಪಡಿಸಲು ಸಹಕಾರಿ. ಈ ಹತ್ತು ಸೂತ್ರಗಳನ್ನು ಸರಿಯಾಗಿ ಅನುಸರಿಸಿದಲ್ಲಿ ನಿಮ್ಮ ಹಲ್ಲು ನಿಮ್ಮ ನಗು ಆಸ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.