ನಿಮ್ಮ ಮಕ್ಕಳು ಕಾವಲುಗಾರರಾಗಬೇಕು ಎಂದಿದ್ದರೆ ಮೋದಿಗೆ ಮತ ಹಾಕಿ: ಕೇಜ್ರಿವಾಲ್

ಹೊಸದಿಲ್ಲಿ, ಮಾ. 20: ಬಿಜೆಪಿಯ ‘ನಾನು ಕೂಡ ಚೌಕಿದಾರ’ (ಕಾವಲುಗಾರ) ಅಭಿಯಾನವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್, ನಿಮ್ಮ ಮಕ್ಕಳನ್ನು ಕಾವಲುಗಾರರನ್ನಾಗಿ ಮಾಡಲು ಬಯಸುವುದಾದರೆ ನರೇಂದ್ರ ಮೋದಿ ಅವರಿಗೆ ಮತ ಹಾಕಿ ಎಂದಿದ್ದಾರೆ.
ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಬಯಸಿದರೆ, ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿ ಎಂದು ಅವರು ಹೇಳಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕೇಜ್ರಿವಾಲ್, ಸಂಪೂರ್ಣ ದೇಶದ ಜನರನ್ನು ಕಾವಲುಗಾರರನ್ನಾಗಿ ಮಾಡಲು ಮೋದಿ ಬಯಸಿದ್ದಾರೆ ಎಂದಿದ್ದಾರೆ.
ನಿಮ್ಮ ಮಕ್ಕಳನ್ನು ಕಾವಲುಗಾರರನ್ನಾಗಿ ಮಾಡಲು ಬಯಸುವುದಾದರೆ ಮೋದಿಗೆ ಮತ ಹಾಕಿ. ಆದರೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಡಾಕ್ಟರ್, ಎಂಜಿನಿಯರ್ ಅಥವಾ ವಕೀಲರನ್ನಾಗಿ ಮಾಡಲು ಬಯಸುವವರು ಆಪ್‌ಗೆ ಮತ ಹಾಕಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಭ್ರಷ್ಟಾಚಾರ ಹಾಗೂ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟದಲ್ಲಿ ತಾನು ಏಕಾಂಗಿಯಲ್ಲ ಎಂದು ಹೇಳಲು ‘ನಾನು ಕೂಡ ಚೌಕಿದಾರ’ ಪ್ರತಿಜ್ಞೆ ಕೈಕೊಳ್ಳುವಂತೆ ಮೋದಿ ಅವರು ಶನಿವಾರ ತನ್ನ ಬೆಂಬಲಿಗರನ್ನು ಆಗ್ರಹಿಸಿದ್ದರು.
ಅನಂತರ ಪ್ರಧಾನ ಮಂತ್ರಿ ಅವರೊಂದಿಗೆ ಬಿಜೆಪಿ ನಾಯಕರು ‘ನಾನು ಕೂಡ ಚೌಕಿದಾರ’ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹಿತ ಪಕ್ಷದ ಹಲವು ನಾಯಕರು ತಮ್ಮ ಟ್ವಿಟ್ಟರ್ ಪ್ರೊಫೈಲ್‌ನ ಹೆಸರಿನ ಮುಂದೆ ‘ಚೌಕಿದಾರ್’ ಪದ ಸೇರಿಸಿದ್ದರು.







