ನ್ಯೂಝಿಲೆಂಡ್ ನಲ್ಲಿ ರೈಫಲ್ ಗಳ ಮಾರಾಟ ನಿಷೇಧ
ಕ್ರೈಸ್ಟ್ ಚರ್ಚ್ , ಮಾ.21: ನ್ಯೂಝಿಲೆಂಡ್ ನಲ್ಲಿ ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಇದೀಗ ಅಲ್ಲಿನ ಸರಕಾರವು ಅರೆ –ಸ್ವಯಂಚಾಲಿತ ಸೇರಿದಂತೆ ಎಲ್ಲ ಬಗೆಯ ರೈಫಲ್ ಗಳ ಮಾರಾಟವನ್ನು ನಿಷೇಧಿಸಿದ್ದು, ಬಂದೂಕುಗಳ ಖರೀದಿಯ ನಿಯಮವನ್ನು ಕಠಿಣಗೊಳಿಸಿದೆ.
ಇತ್ತೀಚೆಗೆ ಕ್ರೈಸ್ಟ್ ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ಆಸ್ಟ್ರೇಲಿಯದ ಉಗ್ರ ಬ್ರೆಂಟಾಣ್ ಟರ್ರೆಂಟ್ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಮಸೀದಿಗೆ ಶುಕ್ರವಾರದ ಪ್ರಾರ್ಥನೆಗೆ ಆಗಮಿಸಿದ್ದ 49 ಮಂದಿ ಮೃತಪಟ್ಟು, 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಈ ಘಟನೆಯ ಬಳಿಕ ಆಕ್ರಮಣ ಮತ್ತು ಅರೆ ಸ್ವಯಂಚಾಲಿತ ರೈಫಲ್ ಗಳ ಮಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ನ್ಯೂಝಿಲೆಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ತಿಳಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪೊಲೀಸರ ಅನುಮತಿಯಿಲ್ಲದೆ ಯಾರು ಬಂದೂಕುಗಳನ್ನು ಖರೀದಿಸುವಂತಿಲ್ಲ ಎಂದು ಪ್ರಧಾನಿ ಜಸಿಂದಾ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಬಂದೂಕು ಪಡೆಯಲು ಇರುವ ಕಾನೂನು ಬಿಗಿಗೊಳಿಸಿ, ಈಗ ಇರುವ ನಿಯಮಗಳಲ್ಲಿ ಬದಲಾವಣೆ ತರಲು ಸರಕಾರ ಚಿಂತನೆ ನಡೆಸಿದೆ.
ದಾಳಿಕೋರ ಟರ್ರೆಂಟ್ 2017ರಲ್ಲಿ ಕ್ಯಾಟಗರಿ ಎ ಬಂದೂಕು ಪರವಾನಿಗೆ ಪಡೆದಿದ್ದನು. ಎರಡು ಅರೆ ಸ್ವಯಂಚಾಲಿತ ರೈಫಲ್ ಗಳು , ಎರಡು ಶಾಟ್ ಗನ್ ಗಳು ಹಾಗೂ ಲಿವರ್ ಆ್ಯಕ್ಸೆನ್ ಬಂದೂಕಿನೊಂದಿಗೆ ಮಸೀದಿಯ ಮೇಲೆ ದಾಳಿ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.