ಬಾಕಿ ವೇತನ ಪಾವತಿಸುವಂತೆ ಜೆಟ್ ಏರ್‌ವೇಸ್ ಪೈಲೆಟ್‌ಗಳಿಂದ ಪ್ರಧಾನಿಗೆ ಪತ್ರ
ಹೊಸದಿಲ್ಲಿ, ಮಾ. 21: ಜೆಟ್ ಏರ್‌ವೇಸ್‌ನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪ್ರವೇಶಿಸುವಂತೆ ಹಾಗೂ ತಮ್ಮ ಬಾಕಿ ಇರುವ ವೇತನ ಬಿಡುಗಡೆ ಮಾಡುವಂತೆ ಜೆಟ್ ಏರ್‌ವೇಸ್‌ನ ಪೈಲೆಟ್‌ಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಗರಿಕ ವಾಯು ಯಾನ ಸಚಿವ ಸುರೇಶ್ ಪ್ರಭು ಅವರಲ್ಲಿ ಮನವಿ ಮಾಡಿದ್ದಾರೆ.
''ಜೆಟ್ ಏರ್‌ವೇಸ್ ಕುಸಿತದ ಅಂಚಿನಲ್ಲಿರುವುದರಿಂದ ನಮಗೆ ಭೀತಿ ಇದೆ. ಇದರಿಂದ ಸಾವಿರಾರು ಜನರು ನಿರುದ್ಯೋಗಿಗಳಾಗಬಹುದು. ಸಾಮರ್ಥ್ಯದ ಇಳಿಕೆಯಿಂದ ದರಗಳು ಏರಿಕೆಯಾಗುವುದರಿಂದ ವಿಮಾನದ ವ್ಯವಸ್ಥೆಯಲ್ಲಿ ಬದಲಾವಣೆಯಾಗಬಹುದು ಹಾಗೂ ಪ್ರಯಾಣಿಕರಿಗೆ ಅನನುಕೂಲತೆ ಉಂಟಾಗಬಹುದು ಎಂದು ಜೆಟ್ ಏರ್‌ವೇಸ್‌ನ ನೋಂದಾಯಿತ ಕಾರ್ಮಿಕ ಸಂಘಟನೆ ನ್ಯಾಷನಲ್ ಏವಿಯೇಶನ್ ಗಿಲ್ಡ್ (ಎನ್‌ಎಜಿ) ಹೇಳಿದೆ. ಬಾಕಿ ಇರುವ ವೇತನವನ್ನು ಮಾರ್ಚ್ 31ರ ಒಳಗೆ ಪಾವತಿಸದೇ ಇದ್ದರೆ, ಎಪ್ರಿಲ್ 1ರಿಂದ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗುವುದು ಎಂದು ಎರಡು ದಿನಗಳ ಹಿಂದೆ ಪೈಲೆಟ್‌ಗಳು ಬೆದರಿಕೆ ಒಡ್ಡಿದ್ದರು. ಜೆಟ್ ಏರ್‌ವೇಸ್ ಕಠಿಣ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪೈಲಟ್ ಹಾಗೂ ಎಂಜಿನಿಯರ್ಸ್‌ಗಳನ್ನು ಹೊರತುಪಡಿಸಿ ಇತರ ಸಿಬ್ಬಂದಿಗೆ ಮಾತ್ರ ವೇತನವನ್ನು ಸರಿಯಾದ ಸಮಯಕ್ಕೆ ನೀಡಲಾಗುತ್ತಿದೆ ಎಂದು ಎನ್‌ಎಜಿ ಪ್ರಧಾನಿ ಮೋದಿ ಹಾಗೂ ಪ್ರಭು ಅವರಿಗೆ ತಿಳಿಸಿದೆ.
''ಪೈಲೆಟ್ ಹಾಗೂ ಎಂಜಿನಿಯರ್‌ಗಳು ವೇತನ ಪಡೆಯದೆ ಸುಮಾರು ಮೂರು ತಿಂಗಳು ಆಯಿತು. ನಾವು ಆಡಳಿತ ಮಂಡಳಿಗೆ ಮತ್ತೆ ಮತ್ತೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ವಿಮಾನ ಸಂಚಾರದಲ್ಲಿ ವೃತ್ತಿಪರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದೆ. ಆದರೆ, ಪ್ರಯಾಣಿಕರಿಗೆ ತೊಂದರೆ ಉಂಟು ಮಾಡದಿರಲು ಪೈಲೆಟ್‌ಗಳು ನಿರ್ಧರಿಸಿದ್ದಾರೆ'' ಎನ್‌ಎಜಿ ಹೇಳಿದೆ. ನರೇಶ್ ಗೋಯಲ್ ನೇತೃತ್ವದ ಜೆಟ್ ಏರ್‌ವೇಸ್ ತನ್ನ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಈಗ ಏರ್‌ವೇಸ್ 1 ಶತಕೋಟಿ ಸಾಲ ಇದೆ.







