ಲೋಕಸಭಾ ಚುನಾವಣೆ: 1,206 ರೌಡಿಗಳಿಂದ ಮುಚ್ಚಳಿಕೆ; ಸಂದೀಪ್ ಪಾಟೀಲ್
ಮಂಗಳೂರು, ಮಾ.22: ‘ಮುಂಬರುವ ಲೋಕಸಭಾ ಚುನಾವಣೆ ಸಂದರ್ಭ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 1,206 ರೌಡಿ ಮತ್ತು ಗೂಂಡಾಗಳಿಂದ ಮುಚ್ಚಳಿಕೆ ಪಡೆದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
‘ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ 447 ಜಾಮೀನು ರಹಿತ ವಾರೆಂಟ್ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈಗಾಗಲೇ ಸ್ಥಳೀಯ ಠಾಣೆಗಳಲ್ಲಿ ಸುಮಾರು 1,957 ಬಂದೂಕು ಆಯುಧಗಳನ್ನು ಠೇವಣಿ ಇರಿಸಲಾಗಿದೆ’ ಎಂದು ಪೊಲೀಸ್ ಆಯುಕ್ತರು ಹೇಳಿಕೆಯಲ್ಲಿ ಮಾಹಿತಿ ನೀಡಿದರು.
‘ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಈಗಾಗಲೇ ಸೂಕ್ಷ್ಮ ಪ್ರದೇಶದ 12 ಸ್ಥಳಗಳಲ್ಲಿ ಸಿ.ಎ.ಪಿ.ಎಫ್. ಮತ್ತು ಪೊಲೀಸ್ ಇಲಾಖೆಯು ಜಂಟಿ ಪಥ ಸಂಚಲನೆ ನಡೆಸಲಾಗಿದೆ. ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಚುನಾವಣಾ ಕರ್ತವ್ಯದ ತರಬೇತಿ ನೀಡಲಾಗಿದೆ. ರೌಡಿಗಳಿಗೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲಾಗಿದೆ’ ಎಂದು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.





