ನರಿಕೊಂಬು, ಸರಪಾಡಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ನಿರ್ಧಾರ
ಬಂಟ್ವಾಳ, ಮಾ. 24: ನಾಯಿಲದಿಂದ ಬೊರುಗುಡ್ಡೆ ಸಂಪರ್ಕಿಸುವ ರಸ್ತೆಯ ಅವ್ಯವಸ್ಥೆಯಿಂದ ನೊಂದ ನರಿಕೊಂಬು ಗ್ರಾಮಸ್ಥರು, ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಎಂಬಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಹಾಕಲಾಗಿದೆ. ಈ ಭಾಗದಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳಿವೆ. ನಾಯಿಲದಿಂದ ಬೊರುಗುಡ್ಡೆ ಸಂಪರ್ಕಿಸುವ ಸುಮಾರು 2.50 ಕಿ.ಮೀ. ರಸ್ತೆಯು ತೀರಾ ಹದಗೆಟ್ಟಿದ್ದು, ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿದೆ. ಅದಲ್ಲದೆ, ಮೂಲಭೂತ ಸೌಕರ್ಯಗಳು ಈ ಭಾಗಕ್ಕೆ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸರಪಾಡಿ ಗ್ರಾಮಸ್ಥರು
"ರಸ್ತೆಗೆ ಡಾಮಾರು ಮಾಡಿ ಕೊಟ್ಟರೆ ಮಾತ್ರ ಮತದಾನ ಮಾಡುತ್ತೇವೆ. ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮಾಡುತ್ತವೆ" ಎಂದು ಸರಪಾಡಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದಾರೆ.
ಇಲ್ಲಿನ ರಸ್ತೆಗೆ ಡಾಮರೀಕರಣ ಮಾಡದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಗೆ ಬಹಿಷ್ಕಾರದ ಬ್ಯಾನರ್‍ವೊಂದನ್ನು ಬಜೆ ಪರಿಸರದಲ್ಲಿ ಹಾಕಲಾಗಿದೆ. ಸುದ್ದಿ ತಿಳಿದಂತೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಬ್ಯಾನರ್ ಅನ್ನು ತೆರವು ಮಾಡಿದ್ದಾರೆ.
ಸರಪಾಡಿ ಗ್ರಾಮದ ಮಣಿನಾಲ್ಕೂರು-ದೇವಸ್ಯಪಡೂರು ಸಂಪರ್ಕದ ಬಜೆ ರಸ್ತೆಯ ಡಾಮರೀಕರಣಕ್ಕೆ ಕಳೆದ ಹದಿನೈದು ವರ್ಷಗಳಿಂದ ಬೇಡಿಕೆಯ ಜೊತೆಗೆ ಹೋರಾಟ ಮಾಡುತ್ತಾ ಬಂದ್ದೇವೆ. ಆದರೆ, ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟ ಈ ಭಾಗದ ಜನರು ಸೌಲಭ್ಯ ವಂಚಿರಾಗುವಂತೆ ಮಾಡಿದೆ. ಇಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿದ್ದು, ಪ್ರಾರ್ಥನಾ ಮಂದಿರ ಶಾಲೆ ಹಾಗೂ ಆಸ್ಪತ್ರೆ ಇದೆ. ರಸ್ತೆಗೆ ಡಾಮರೀಕರಣ ಮಾಡದ ಹಿನ್ನೆಲೆಯಲ್ಲಿ ಧೂಳಿನಿಂದ ಕಫ ಹಾಗೂ ಕೆಮ್ಮುಶೀತ ಸಹಿತ ಇನ್ನಿತರ ಕಾಯಿಲೆಗಳು ಇಲ್ಲಿನ ನಿವಾಸಿಗಳಿಗೆ ಬಾಧಿಸುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.







