ನಾಗೇಂದ್ರ ನಮ್ಮ ಹುಡುಗ, ನಾನೇ ಭೇಟಿ ಮಾಡಿ ಬರುವೆ: ಸಚಿವ ಡಿಕೆಶಿ

ಬಳ್ಳಾರಿ, ಮಾ.25 : ಕಾಂಗ್ರೆಸ್‌ನಲ್ಲಿ ನಿನ್ನ ಹೆಣ ಹೊರುವವನೂ ನಾನೇ, ನಿನ್ನ ಪಲ್ಲಕ್ಕಿ ಹೊರುವವನೂ ನಾನೇ ಎಂದು ಈಗಾಗಲೇ ನಾಗೇಂದ್ರನಿಗೆ ಹೇಳಿದ್ದೇನೆ. ನಿನ್ನ ಕಷ್ಟಕಾಲಕ್ಕೂ, ಸುಖಕ್ಕೂ ಆಗುವವನು ನಾನೇ ಎಂದು ಅರ್ಥ ಮಾಡಿಸಿದ್ದೇನೆ. ಅವನು ನಮ್ಮ ಹುಡುಗ, ತಪ್ಪುಮಾಡಿರಬಹುದು. ಯಾರು ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ನಾನು ಹೋಗಿ ನಾಗೇಂದ್ರರನ್ನ ಭೇಟಿ ಮಾಡಿ ಬರುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಂಡೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂದು ಶಾಂತಕ್ಕ ದಿಲ್ಲಿಗೆ, ಡಿಕೆಶಿ ಜೈಲಿಗೆ ಎಂದು ಶ್ರೀರಾಮುಲು ಹೇಳಿದ್ದರು. ಆದರೆ ನಾನು ಇಂದು ಸಂಡೂರಿನಲ್ಲಿ ನಿಮ್ಮ ಸೇವೆ ಮಾಡಲು ಬಂದು ವೇದಿಕೆಯ ಮೇಲೆ ನಿಂತಿದ್ದೇನೆ. ಅಂದು ಬಜೆಟ್‌ನಲ್ಲಿ ಸುಮಾರು 5 ಸಾವಿರ ಕೋಟಿ ಅನುದಾನವನ್ನು ಬಳ್ಳಾರಿಗೆ ನೀಡಿದ್ದೇವೆ. ಬಡವರಿಗಾಗಿ ಮನೆಯನ್ನು ಕಟ್ಟಿಸಿಕೊಟ್ಟಿದ್ದೇವೆ. ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಬಳ್ಳಾರಿಗೆ 2 ಸಚಿವ ಸ್ಥಾನ ನೀಡಿದ್ದೇವೆ. ಆನಂದ್ ಸಿಂಗ್‌ಗೆ ನಿಗಮ ಕೊಡುತ್ತೇವೆ. ಅದೇ ರೀತಿ ನಾಗೇಂದ್ರಗೂ ನಿಗಮ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದೇವೆ ಎಂದರು.
ಉಗ್ರಪ್ಪರನ್ನು ಗೆಲ್ಲಿಸಿದ ವಿಚಾರವನ್ನು ಕೃಷ್ಣದೇವರಾಯನ ಕಾಲದ ಕುಸ್ತಿ ಸ್ಪರ್ಧೆಗೆ ಹೋಲಿಸಿ ಬಳ್ಳಾರಿ ಜನರನ್ನು ಅಭಿನಂದಿಸಿದ ಡಿಕೆಶಿ, ಕನಕಪುರದ ಕೆಂಪೇಗೌಡರು ಈ ಹಿಂದೆ ಕೃಷ್ಣದೇವರಾಯರ ಕಾಲದಲ್ಲಿ ಕುಸ್ತಿ ಆಡಿ ಕಂಠಿಹಾರ ಗೆದ್ದಿದ್ದರು. ಅಲ್ಲಿಂದ ಬಂದು ಹಂಪಿಯಲ್ಲಿ ಕುಸ್ತಿಯಲ್ಲಿ ಗೆದ್ದು, ಕಂಠಿಹಾರ ಗೆದ್ದುಕೊಂಡು ಹೋಗಿದ್ದರು. ನಾನು ಬಳ್ಳಾರಿಗೆ ಚುನಾವಣೆಗೆ ಬಂದಾಗ, ಕೋಟೆ ಮಲ್ಲಯ್ಯನಿಗೆ ಪೂಜೆ ಸಲ್ಲಿಸಿ ಉಗ್ರಪ್ಪರನ್ನ ಗೆಲ್ಲಿಸಿಕೊಟ್ಟೆ. ಉಗ್ರಪ್ಪರನ್ನ ಗೆಲ್ಲಿಸುವ ಮೂಲಕ ನೀವೂ ನನಗೆ ಕಂಠಿಹಾರವನ್ನು ಕೊಟ್ಟಿದ್ದೀರಿ ಎಂದರು.







