ಬಳ್ಳಾರಿ ಗುಡಿಗೆ ಉಗ್ರಪ್ಪನೆ ಪೂಜಾರಿ, ಮತದಾರರೇ ದೇವರು: ಸಚಿವ ಡಿಕೆಶಿ

ಬಳ್ಳಾರಿ, ಮಾ.24: ‘ಬಳ್ಳಾರಿ ಎಂಬ ಗುಡಿಗೆ ಉಗ್ರಪ್ಪನೆ ಪೂಜಾರಿ. ದಿಲ್ಲಿಯಲ್ಲಿ ಬಳ್ಳಾರಿ ಜನರ ಧ್ವನಿಯಾಗಲು ಅವರೇ ಸೂಕ್ತ. ಉಪ ಚುನಾವಣೆಯಲ್ಲಿ ನೀವು ಕೊಟ್ಟ ಜಯವೆ ನಮಗೆ ‘ಕಂಠಿಹಾರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರವಿವಾರ ಬಳ್ಳಾರಿಯ ಸಂಡೂರು ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮತದಾನ ನಿಮ್ಮ ಅಸ್ತ್ರ. ಅದನ್ನು ಸರಿಯಾಗಿ ಬಳಸಿಕೊಳ್ಳಿ’. ಬಳ್ಳಾರಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರನ್ನು ಮತ್ತೆ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ನನಗೆ ಬಳ್ಳಾರಿ ಮತದಾರರು ಮುಖ್ಯ. ಉಪ ಚುನಾವಣೆಯಲ್ಲಿ ಬಳ್ಳಾರಿ ಜನತೆ ಉಗ್ರಪ್ಪ ಅವರಿಗೆ ಕೊಟ್ಟ ತೀರ್ಪು ಇತಿಹಾಸ ಪುಟ ಸೇರಿದೆ. ಅದಕ್ಕೆ ನಾನು ಮತದಾರರಿಗೆ ಸಾಷ್ಟಾಂಗ ನಮಸ್ಕಾರ ಮಾಡುವೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ನಮಸ್ಕರಿಸಿದರು.
ಕೃಷ್ಣದೇವರಾಯನ ಕಾಲದಲ್ಲಿ ಸಾಮಂತ ರಾಜ ಇಲ್ಲಿ ಕುಸ್ತಿ ಆಡಿ ಗೆಲ್ತಾರೆ. ಆಗ ಕೃಷ್ಣದೇವರಾಯ ಗೆದ್ದ ಸಾಮಂತರಿಗೆ ಎರಡು ಕಂಠಿಹಾರ ಕೊಟ್ಟು ಕಳಿಸುತ್ತಾರೆ. ಅದೇ ರೀತಿ ಉಗ್ರಪ್ಪ ಅವರನ್ನು ಗೆಲ್ಲಿಸಲು ನಾನು ಇಲ್ಲಿ ಬಂದಿದ್ದೇನೆ. ನಾನು ಬಳ್ಳಾರಿ ಬಂದ ಕೂಡಲೇ ಕನಕದುರ್ಗಮ್ಮ ದೇವಾಲಯಕ್ಕೆ ಹೋಗದೇ, ಕೋಟೆ ಮಲ್ಲೇಶ್ವರನ ದೇವಾಲಯಕ್ಕೆ ಹೋದೆ. ನಾನು ಯುದ್ಧಕ್ಕೆ ಬಂದಿದ್ದೇನೆ, ಯುದ್ದದಲ್ಲಿ ಸಾವು-ನೋವು ಆಗಬಾರದು ಅಂತ ಬೇಡಿದೆ. ಅದರಂತೆ ಬಳ್ಳಾರಿ ಜನರು ಉಗ್ರಪ್ಪ ಅವರನ್ನು ಗೆಲ್ಲಿಸಿ ನನಗೆ ಕಂಠಿಹಾರವನ್ನೇ ಕೊಟ್ಟರು ಅವರು ಹೇಳಿದರು.
‘ನಮ್ಮ ಶ್ರೀರಾಮುಲು ಅಣ್ಣನವರು ಈ ಕನಕಪುರದ ಗೌಡರು ಇಲ್ಲಿಗ್ಯಾಕೆ ಬಂದಾರೆ ಅಂತ ನನಗೆ ಕೇಳಿದ್ದರು.’ ಬರಗಾಲ ಇದೆ ಹಂಪಿ ಉತ್ಸವ ಬ್ಯಾಡ ಅಂದ್ರು. ಆದರೆ ಉತ್ಸವ ಮಾಡಲೇಬೇಕು ಅಂತಾ ಉಗ್ರಪ್ಪ ಬೆನ್ನತ್ತಿದ್ದರು. ಎರಡು ದಿನ ಹಂಪಿ ಉತ್ಸವ ಮಾಡಿದ್ವಿ ಎಂದು ಶಿವಕುಮಾರ್ ತಿಳಿಸಿದರು.
ಚುನಾವಣೆ ನಂತರ ಕೊಟ್ಟ ಮಾತಿನಂತೆ ಬಳ್ಳಾರಿ ಜನರಿಗೆ ಕೊಡುಗೆ ನೀಡಿದ್ದೇವೆ. 280 ಎಕರೆ ಪ್ರದೇಶದಲ್ಲಿ 8 ಸಾವಿರ ಮನೆಯ ಟೆಂಡರ್ ಆಹ್ವಾನಿಸಿ, ಎಲ್ಲ ಶಾಸಕರ ಸಮ್ಮುಖದಲ್ಲಿ ಭೂಮಿ ಪೂಜೆ ಮಾಡಿದ್ದೇವೆ. ಎಲ್ಲ ಕ್ಷೇತ್ರದಲ್ಲಿ ಒಂದೊಂದು ಯೋಜನೆ ಜಾರಿ ಮಾಡಲು ಮುಂದಾಗಿದ್ದೇವೆ. ಬಳ್ಳಾರಿಗೆ ಇಬ್ಬರು ಸಚಿವರನ್ನು ಕೊಟ್ಟಿದ್ದೇವೆ ಎಂದು ಅವರು ಹೇಳಿದರು.
ಶಾಸಕ ನಾಗೇಂದ್ರಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಘೋಷಿಸಬೇಕಿತ್ತು ಆದರೆ, ತಡೆಹಿಡಿಯಲಾಯಿತು. ಭೀಮಾನಾಯ್ಕಾಗೆ ಸಂಪುಟ ದರ್ಜೆಯ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಈ ಕೆಲಸದ ಬಗ್ಗೆ ನನಗೆ ಸಮಾಧಾನ ಇದೆ ಎಂದು ಅವರು ಹೇಳಿದರು.
ಕಳೆದ ಚುನಾವಣೆ ವೇಳೆ ಶ್ರೀರಾಮುಲು ಅಣ್ಣ 6ನೆ ತಾರೀಖಿನ ನಂತರ ಶಾಂತ ದಿಲ್ಲಿಗೆ, ಡಿ.ಕೆ.ಶಿವಕುಮಾರ್ ಜೈಲಿಗೆ ಅಂದಿದ್ರು. ಅಕ್ಕ ದಿಲ್ಲಿಗೆ ಹೋಗಲಿಲ್ಲ, ಉಗ್ರಪ್ಪ ದಿಲ್ಲಿಗೆ ಹೋದ್ರು. ನಾನು ಜೈಲಿಗೆ ಹೋಗಲಿಲ್ಲ, ಇಲ್ಲೇ ಇದ್ದೇನೆ. ಶ್ರೀರಾಮುಲು ಅಣ್ಣಾ ನಿಮ್ಮ ಆಶಿರ್ವಾದ ನಮ್ಮ ಮೇಲೆ ಇರಲಿ ಎಂದು ಅವರು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಅಭ್ಯರ್ಥಿ ಯಾರು ಇರಲಿಲ್ಲ. ಹೀಗಾಗಿ ಆ ನಾಯಕರು ಕಾಂಗ್ರೆಸ್ ಕಾರ್ಯಕರ್ತ ದೇವೆಂದ್ರಪ್ಪ ಅವರನ್ನು ಕರೆದುಕೊಂಡು ಹೋಗಿದ್ದಾರೆ. ದೇವೆಂದ್ರಪ್ಪ ದೇವರಿದ್ದಂತೆ. ನನ್ನ ಬಳಿಯೂ ಟಿಕೆಟ್ ಕೇಳೋಕೆ ಬಂದಿದ್ರು, ಆಗೋಲ್ಲ ಅಂದೆ. ಶ್ರೀರಾಮುಲು ಅವರ ಬಳಿ ಹೋಗಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ದೇವೆಂದ್ರಪ್ಪಗೆ ಮಾತಾಡೋ ಶಕ್ತಿ ಇದೆ ಏನ್ರಿ ? ಎಂದು ಅವರು ಪ್ರಶ್ನಿಸಿದರು
ಬಳ್ಳಾರಿ ಪುಣ್ಯ ಕ್ಷೇತ್ರ. ಇದು ಸಾಮಾನ್ಯ ಕ್ಷೇತ್ರ ಆಗಿದ್ರೆ ನಾನೇ ಇಲ್ಲಿ ಸ್ಪರ್ಧೆ ಮಾಡ್ತಿದ್ದೆ. ಮುಂದೆ ಮೀಸಲಾತಿ ಬದಲಾದರೇ, ನನಗೆ ಒಂದು ಅವಕಾಶ ಕೊಡಿ. ಕೊನೆ ದಿನಗಳು ನಾನು ಇಲ್ಲೆ ಕಳೆಯುವ ಅವಕಾಶ ಮಾಡಿಕೊಡಿ ಎಂದು ಅವರು ಮನವಿ ಮಾಡಿದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನಮಗೆ ಸಹಾಯ ಮಾಡಿದ್ದಾರೆ. ಅವರನ್ನು ಈ ಬಾರಿಯೂ ಸಂಪರ್ಕ ಮಾಡುತ್ತೇನೆ. ನಮ್ಮದು ಅಭಿವೃದ್ಧಿ, ಶಾಂತಿಯ ವಾತಾವರಣ. 26ನೆ ತಾರಿಖು ಮಂಗಳವಾರ ನಾಮಪತ್ರ ಸಲ್ಲಿಸಲು ಮುಂದಾಗುತ್ತೇವೆ ಎಂದು ಅವರು ಹೇಳಿದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಏನೂ ಹೇಳೋತ್ತದೋ ಅದನ್ನು ಮಾಡುವೆ. ನಾನು ಯಾವತ್ತೂ ಅರ್ಜಿ ಹಾಕಲು ಹೋಗೋಲ್ಲ. ನನ್ನ ತಮ್ಮನೂ ಅರ್ಜಿ ಹಾಕಿಲ್ಲ. ಪಕ್ಷ ಏನು ತೀರ್ಮಾನ ಮಾಡೋತ್ತದೋ ಅದಕ್ಕೆ ನಾನು ರೆಡಿ. ಪಕ್ಷ ಮನೆಯಲ್ಲಿ ಇರು ಅಂದಾಗ ಇದ್ದೆ. ಅಧಿಕಾರ ಮಾಡು ಅಂದಾಗ ಮಾಡಿದ್ದೇನೆ’
-ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ, ಸಚಿವ







