ಬಿಜೆಪಿ ಸಂಸದನಿಗೆ ಟಿಕೆಟ್ ನಿರಾಕರಣೆ: ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರಕ್ಕೆ ಚಿಂತನೆ

ಗಾಂಧೀನಗರ, ಮಾ.24: ಗುಜರಾತ್‌ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 15 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿರುವಂತೆಯೇ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಟಿಕೆಟ್ ನಿರಾಕರಿಸಲ್ಪಟ್ಟಿರುವ ಸುರೇಂದ್ರನಗರ ಕ್ಷೇತ್ರದ ಸಂಸದ ದೇವ್ ಜಿ ಫತೇಹ್‌ಪಾರ ಪಕ್ಷ ತ್ಯಜಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುವ ಬಗ್ಗೆ ಬೆಂಬಲಿಗರೊಂದಿಗೆ ಸಮಾಲೋಚಿಸುವುದಾಗಿ ತಿಳಿಸಿದ್ದಾರೆ.
ಸುರೇಂದ್ರನಗರ ಕ್ಷೇತ್ರದಲ್ಲಿ ಈ ಬಾರಿ ದೇವ್ ಜಿ ಬದಲು ಮಹೇಂದ್ರ ಮುಂಜ್ ಪಾರಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಈ ಬಗ್ಗೆ ಅಸಮಾಧಾನ ಸೂಚಿಸಿರುವ ದೇವ್ ಜಿ, ಮಾಜಿ ಸಚಿವ ಜಯಂತಿ ಕಾವಡಿಯಾ ಮತ್ತು ಶಾಸಕ ಧನ್‌ಜಿ ಪಟೇಲ್ ಸೂಚನೆಯ ಮೇರೆಗೆ ತನಗೆ ಟಿಕೆಟ್ ನಿರಾಕರಿಸಲಾಗಿದ್ದು, ಇವರಿಬ್ಬರಿಗೆ ನಿಷ್ಟರಾಗಿರುವ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದರೂ ತನಗೆ ಬಿಜೆಪಿ ಅನ್ಯಾಯ ಮಾಡಿದೆ. ಶೀಘ್ರವೇ ಕೋಲಿ ಸಮುದಾಯದ ಮುಖಂಡರ ಸಭೆ ಕರೆದು ಚರ್ಚಿಸಲಿದ್ದೇನೆ. ಮುಖಂಡರು ಹೇಳಿದರೆ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ದೇವ್‌ಜಿ ಹೇಳಿದ್ದಾರೆ. ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿರುವ ಮಹೇಂದ್ರ ಮುಂಜ್‌ಪಾರ ಮತ್ತು ಧನ್ ಜಿ ಪಟೇಲ್, ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಹೇಳಿದ್ದಾರೆ.







