ಓಲಾ ಟ್ಯಾಕ್ಸಿ ಸೇವೆ ನಿಷೇಧ ಆದೇಶ ಹಿಂಪಡೆದ ರಾಜ್ಯ ಸರಕಾರ
![ಓಲಾ ಟ್ಯಾಕ್ಸಿ ಸೇವೆ ನಿಷೇಧ ಆದೇಶ ಹಿಂಪಡೆದ ರಾಜ್ಯ ಸರಕಾರ ಓಲಾ ಟ್ಯಾಕ್ಸಿ ಸೇವೆ ನಿಷೇಧ ಆದೇಶ ಹಿಂಪಡೆದ ರಾಜ್ಯ ಸರಕಾರ](https://www.varthabharati.in/sites/default/files/images/articles/2019/03/24/183691.jpg)
ಬೆಂಗಳೂರು, ಮಾ.24: ಮೊಬೈಲ್ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಓಲಾ ಕಂಪೆನಿ ಪರವಾನಗಿ ನಿಷೇಧ ಆದೇಶ ಹಿಂಪಡೆಯಲು ಸರಕಾರ ನಿರ್ಧರಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ರವಿವಾರ ಟ್ವಿಟ್ ಮಾಡಿರುವ ಅವರು, ಇಂದಿನಿಂದ ಓಲಾ ಕಂಪೆನಿ ಕ್ಯಾಬ್ಗಳು ಎಂದಿನಂತೆ ಸಂಚಾರ ಮಾಡಲಿವೆ. ನೀತಿಗಳನ್ನು ಹೊಸ ತಂತ್ರಜ್ಞಾನದೊಂದಿಗೆ ತುರ್ತಾಗಿ ಬದಲಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ, ಸರಕಾರಗಳು ಹೊಸ ನೀತಿಗಳನ್ನು ಜಾರಿಗೊಳಿಸಲು ಕೈಗಾರಿಕೆಗಳೂ ಸರಕಾರದ ಜೊತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ರದ್ದು, ಹಿನ್ನಲೆ: ಕರ್ನಾಟಕ ಬೇಡಿಕೆ ಆಧಾರಿತ ವೆಬ್ ತಂತ್ರಜ್ಞಾನ, ಅಗ್ರಿಗೇಟರ್ ಅಧಿನಿಯಮ-2016ರ ನಿಯಮ ಉಲ್ಲಂಘಿಸಿದ ಆರೋಪದಡಿ ಓಲಾ ಕಂಪೆನಿಯ ಪರವಾನಗಿ(ಲೆಸನ್ಸ್) ಅನ್ನು ಸಾರಿಗೆ ಮತ್ತು ರಸ್ತೆ ಸುರಕ್ಷೆತೆ ಇಲಾಖೆ ರದ್ದುಗೊಳಿಸಿತ್ತು.
ಈ ಸಂಬಂಧ ಮಾ. 18ರಂದು ಆದೇಶ ಹೊರಡಿಸಿರುವ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ರದ್ದು ಆದೇಶ ಸ್ವೀಕರಿಸಿದ ದಿನಾಂಕದಿಂದ ಮೂರು ದಿನದೊಳಗೆ ಪರವಾನಗಿಯನ್ನು ಸಾರಿಗೆ ಪ್ರಾಧಿಕಾರಕ್ಕೆ ಒಪ್ಪಿಸುವಂತೆ ಜೊತೆಗೆ ತಕ್ಷಣವೇ ಆ್ಯಪ್ ಆಧಾರಿತ ಬೈಕ್, ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಆದರೆ, ಇದೀಗ ಸಚಿವರು ಟ್ವಿಟ್ ಮೂಲಕ ಓಲಾ ಕಂಪೆನಿಯ ಕ್ಯಾಬ್ ಹಾಗೂ ಆಟೋ ಸಂಚಾರ ಸೇವೆ ಎಂದಿನಂತೆ ಇರಲಿದೆ ಎಂದಿದ್ದಾರೆ.