ಉಡುಪಿ ಜೆಡಿಎಸ್ ಕಚೇರಿಯಲ್ಲಿ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ

ಉಡುಪಿ, ಮಾ. 24: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಇಂದು ಉಡುಪಿ ಜಿಲ್ಲಾ ಜೆಡಿಎಸ್ ಕಚೇರಿಗೆ ಭೇಟಿ ನೀಡಿದರು.
ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಗಳಿರುವುದು ಸಹಜ. ಆದರೆ ಅವೆಲ್ಲವನ್ನೂ ಬದಿಗಿಟ್ಟು ಈ ಬಾರಿಯ ಚುನಾ ವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡದ ಶೋಭಾ ಕರಂದ್ಲಾಂಜೆ ಈ ಬಾರಿಯೂ ಮೋದಿಯ ಹೆಸರಿನಲ್ಲಿ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಆದುದರಿಂದ ಎರಡು ಪಕ್ಷಗಳ ಕಾರ್ಯಕರ್ತರು ಸೇರಿ ಶೋಭಾರನ್ನು ಸೋಲಿಸುವ ಕೆಲಸ ಮಾಡಬೇಕು. ಸಿದ್ದರಾಮಯ್ಯ ಹಾಗು ಪ್ರಸ್ತುತ ಸಮ್ಮಿಶ್ರ ಸರಕಾರಗಳು ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ. ಈ ಚುನಾವಣೆಯಲ್ಲಿ ಗೆದ್ದರೆ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸಮಾನವಾಗಿ ನೋಡುತ್ತೇನೆ ಎಂದರು.
ಸಭೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಮುಖಂಡ ಎಂ.ಬಿ.ಸದಾಶಿವ, ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ದ.ಕ. ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಜ್ಞಿ, ಕಾಂಗ್ರೆಸ್ ಮುಖಂಡರಾದ ಜಿ.ಎ.ಬಾವಾ, ಎಂ.ಎ. ಗಫೂರ್, ಜೆಡಿಎಸ್ ಮುಖಂಡರಾದ ವಾಸುದೇವ ರಾವ್, ಗಂಗಾಧರ ಭಿರ್ತಿ ಮೊದಲಾದವರು ಉಪಸ್ಥಿತರಿದ್ದರು.





