ಚೌಕಿದಾರರ ಪಕ್ಷ ನಮ್ಮ ಕೆಲಸವನ್ನು ಕದ್ದಿದೆ: ವೆಬ್ ಡಿಸೈನಿಂಗ್ ಸಂಸ್ಥೆಯ ಆರೋಪ
ವೆಬ್ ಸೈಟ್ ಹ್ಯಾಕ್ ನಂತರ ಮತ್ತೊಂದು ವಿವಾದ

ಹೊಸದಿಲ್ಲಿ,ಮಾ24: ಬಿಜೆಪಿ ತನ್ನ ಕೆಲಸವನ್ನು ಕಳವು ಮಾಡಿದೆ ಎಂದು ವೆಬ್ ಡಿಸೈನಿಂಗ್ ಸಂಸ್ಥೆಯೊಂದು ಆರೋಪಿಸಿದೆ. ಬಿಜೆಪಿ ಬಳಸಿರುವ ಜಾಲತಾಣದಲ್ಲಿ ತನ್ನ ಸಂಸ್ಥೆಗೆ ಹೆಸರು ನೀಡುವ ವಾಕ್ಯವನ್ನೇ ಅಳಿಸಿ ಹಾಕಲಾಗಿದೆ ಎಂದು ಅದು ದೂರಿದೆ.
ಒಂದು ತಿಂಗಳ ಹಿಂದೆ ಹ್ಯಾಕ್ ಆಗಿದ್ದ ಬಿಜೆಪಿ ಜಾಲತಾಣ ಕೆಲದಿನಗಳ ಹಿಂದಷ್ಟೇ ಸರಿಯಾಗಿತ್ತು. ಆದರೆ ಅದರಲ್ಲಿ ಕೇವಲ ಒಂದು ಸ್ಥಿರ ಪುಟ ಮಾತ್ರ ಕಾಣಿಸುತ್ತಿತ್ತು. ಈ ಪುಟ w3layouts ಎಂಬ ಆಂಧ್ರ ಪ್ರದೇಶ ಮೂಲದ ವೆಬ್ ಡಿಸೈನಿಂಗ್ ಸಂಸ್ಥೆಗೆ ಸೇರಿದ್ದಾಗಿದೆ. ಆದರೆ ಬಿಜೆಪಿ ಈ ವಿಷಯವನ್ನು ಮುಚ್ಚಿ ಹಾಕಿದೆ ಎಂದು ಆರೋಪಿಸಲಾಗಿದೆ.
“ಆರಂಭದಲ್ಲಿ ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗ ನಮ್ಮ ಟೆಂಪ್ಲೆಟ್ ಬಳಸುತ್ತಿರುವ ಬಗ್ಗೆ ನಮಗೆ ಖುಷಿಯಾಗಿತ್ತು. ಆದರೆ ಅವರು ನಮ್ಮ ಅನುಮತಿಯನ್ನು ಪಡೆಯದೆ ನಮ್ಮ ಕೆಲಸವನ್ನು ನಮಗೆ ಯಾವ ಹೆಸರನ್ನೂ ನೀಡದೆ, ಹಣವನ್ನೂ ಪಾವತಿಸದೆ ಬಳಸುತ್ತಿರುವುದನ್ನು ಕಂಡು ಹತಾಶಗೊಂಡೆವು” ಎಂದು w3layouts ನ ಪ್ರತಿನಿಧಿಗಳು ತಿಳಿಸಿದ್ದಾರೆ.
“ನಮ್ಮ ಹೆಸರನ್ನು ಉಲ್ಲೇಖಿಸುವಂತೆ ಬಿಜೆಪಿಗೆ ಟ್ವಿಟರ್ ಮೂಲಕ ಮನವಿ ಮಾಡಿಕೊಂಡ ನಂತರ ಅವರು ಮತ್ತಷ್ಟು ಮುಂದುವರಿದು ಜಾಲತಾಣದಲ್ಲಿದ್ದ ನಮ್ಮ ಸಂಸ್ಥೆಯ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ” ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ. ತನ್ನನ್ನು ಚೌಕಿದಾರ್ ಎಂದು ಕರೆಸಿಕೊಳ್ಳುವ ನಾಯಕ ಮುನ್ನಡೆಸುವ ರಾಷ್ಟ್ರೀಯ ರಾಜಕೀಯ ಪಕ್ಷ ಸಣ್ಣ ಅಂಗಡಿಯಾತನ ಬೆವರು ಮತ್ತು ರಕ್ತವನ್ನು ಕದಿಯುವುದನ್ನು ಕಂಡು ಮತ್ತು ವಂಚನೆ ನಡೆದಿದೆ ಎಂದು ತಿಳಿದಾಗಲೂ ನಿರ್ಲಕ್ಷ್ಯವಹಿಸಿರುವುದನ್ನು ಕಂಡು ನಮಗೆ ಆಶ್ಚರ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.







