ಪಾಕ್ ಸಚಿವನ ಜೊತೆ ಟ್ವಿಟರ್ ನಲ್ಲಿ ವಾಗ್ವಾದಕ್ಕಿಳಿದ ಸುಶ್ಮಾ ಸ್ವರಾಜ್

ಹೊಸದಿಲ್ಲಿ,ಮಾ.24: ಪಾಕಿಸ್ತಾನದಲ್ಲಿ ಇಬ್ಬರು ಹಿಂದು ಬಾಲಕಿಯರನ್ನು ಅಪಹರಿಸಿ ಮತಾಂತರಗೊಳಿಸಿದ ಘಟನೆಗೆ ಸಂಬಂಧಿಸಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಮಾಡಿದ ಟ್ವೀಟ್‌ಗೆ ಪಾಕ್ ಸಚಿವ ಫವಾದ್ ಹುಸೈನ್ ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ಸುಶ್ಮಾ ಕೂಡಾ ಖಾರವಾಗಿ ಉತ್ತರಿಸಿದ್ದಾರೆ.
ಇದು ಪಾಕಿಸ್ತಾನದ ಆಂತರಿಕ ವಿಷಯವಾಗಿದೆ ಎಂದು ಹುಸೈನ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವರಾಜ್, ಘಟನೆಯ ಬಗ್ಗೆ ಇಸ್ಲಾಮಾಬಾದ್‌ನಲ್ಲಿರುವ ರಾಯಭಾರ ಕಚೇರಿಯಿಂದ ವರದಿ ಕೇಳಿರುವುದಕ್ಕೆ ಪಾಕ್ ಸಚಿವರಿಗೆ ಇರಿಸುಮುರುಸು ಆಯಿತೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಗೋರಕ್ಷಣೆಯ ಹೆಸರಲ್ಲಿ ಗುಂಪು ಹಿಂಸಾಚಾರ ನಡೆಸುವ ಬಗ್ಗೆ ನಟ ನಾಸೀರುದ್ದೀನ್ ಶಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ನಾವು ಭಾರತಕ್ಕೆ ತೋರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಹೋಲಿಯ ದಿನದಂದು ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಇಬ್ಬರು ಹಿಂದು ಹೆಣ್ಮಕ್ಕಳನ್ನು ಅಪಹರಿಸಲಾಗಿದೆ. ಈ ಕುರಿತು ವರದಿ ನೀಡುವಂತೆ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸೂಚಿಸಿದ್ದೇನೆ ಎಂದು ಸುಶ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು. ಸಿಂಧ್ ಪ್ರಾಂತದ ಗೋತ್ಕಿ ಜಿಲ್ಲೆಯ ತಮ್ಮ ಮನೆಯಿಂದ ರವೀನಾ (13) ಮತ್ತು ರೀನಾ (15) ಎಂಬ ಇಬ್ಬರು ಹೆಣ್ಮಕ್ಕಳನ್ನು ಪ್ರಭಾವೀ ವ್ಯಕ್ತಿಗಳು ಅಪಹರಿಸಿದ್ದರು.
ಸದ್ಯ ಇಬ್ಬರು ಹೆಣ್ಮಕ್ಕಳ ಅಪಹರಣ, ಒತ್ತಾಯದ ಮತಾಂತರ ಮತ್ತು ಅಪ್ರಾಪ್ತ ವಯಸ್ಸಿನಲ್ಲಿ ಬಲವಂತದ ಮದುವೆಗೆ ಸಂಬಂಧಿಸಿ ತನಿಖೆಗೆ ಪ್ರಧಾನಿ ಇಮ್ರಾನ್ ಖಾನ್ ಆದೇಶಿಸಿದ್ದಾರೆ.
ಹೆಣ್ಮಕ್ಕಳ ಅಪಹರಣದ ನಂತರ ಬಿಡುಗಡೆ ಮಾಡಲಾದ ವಿಡಿಯೊದಲ್ಲಿ ಮೌಲ್ವಿಯೊಬ್ಬ ಅವರಿಗೆ ಮದುವೆ ಮಾಡುವುದನ್ನು ತೋರಿಸಲಾಗಿದೆ. ಇನ್ನೊಂದು ವಿಡಿಯೊದಲ್ಲಿ ಈ ಬಾಲಕಿಯರು ತಾವು ಸ್ವಇಚ್ಛೆಯಿಂದ ಇಸ್ಲಾಂ ಧರ್ಮ ಸ್ವೀಕರಿಸುವುದಾಗಿ ಹೇಳುತ್ತಿರುವುದು ದಾಖಲಾಗಿದೆ. ಅಪಹೃತ ಬಾಲಕಿಯರನ್ನು ರಕ್ಷಿಸಲು ಸಿಂಧ್ ಮತ್ತು ಪಂಜಾಬ್ ಸರಕಾರಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ಸಚಿವ ಫವಾದ್ ಚೌಧುರಿ ತಿಳಿಸಿದ್ದಾರೆ.







