ಅಪಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಸಿಎಂ ಕುಮಾರಸ್ವಾಮಿ

ಮಂಡ್ಯ, ಮಾ.24: ಅಪಪ್ರಚಾರದಿಂದ ಚುನಾವಣೆ ಗೆಲ್ಲಲಿಕ್ಕಾಗಲ್ಲ. ರಾಜಕೀಯ ವಿರೋಧಿಗಳ ಪ್ರಯತ್ನದ ಬಗ್ಗೆ ತಲೆಕೆಡಿಸಿಕೊಳ್ಳೋಲ್ಲ. ಪಕ್ಷದ ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ. ಮಂಡ್ಯ ಅಷ್ಟೇ ಅಲ್ಲ, ನಮ್ಮ ಪಾಲಿನ ಎಂಟು ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಟ್ಯ ಅಭ್ಯರ್ಥಿ ಪುತ್ರ ನಿಖಿಲ್, ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ರವಿವಾರ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುತಂತ್ರದ ರಾಜಕಾರಣಕ್ಕೆ ಬೆದರುವುದಿಲ್ಲ, ಅಪಪ್ರಚಾರಕ್ಕೆ ಕಿವಿಕೊಡುವುದಿಲ್ಲವೆಂದು ಹೇಳಿದರು.
ನನ್ನನ್ನು ಮುಖ್ಯಮಂತ್ರಿ ಮಾಡಬೇಕೆಂದು ಮಂಡ್ಯ ಜನ ಏಳೂ ಕ್ಷೇತ್ರಗಳಲ್ಲಿ ಮತ ನೀಡಿದ್ದಾರೆ. ನಿಖಿಲ್ ಗೆಲ್ಲಿಸುವುದರೊಂದಿಗೆ ಅವರ ಆಶೀರ್ವಾದ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕೆಲವೆಡೆ ಸಣ್ಣಪುಟ್ಟ ಗೊಂದಲ ಇದ್ದರೂ ಅದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತೊಡಕಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು. ನಿಖಿಲ್ ವಿರುದ್ಧ ಯಾರೆಲ್ಲ ಹೊಂದಾಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದೆಲ್ಲ ಗೊತ್ತಿದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲವೆಂದು ಸ್ಪಷ್ಟಪಡಿಸಿದ ಅವರು, ನಿಖಿಲ್ ಗೆಲುವು ಶತಸಿದ್ಧ, ಸೋಲು ಅಸಾಧ್ಯವೆಂದು ಹೇಳಿದರು.
ದ್ವೇಷ ರಾಜಕಾರಣ ನಾವು ಮಾಡಲ್ಲ. ಹಣ ಕೊಟ್ಟು ಯಾರನ್ನೂ ಕೊಂಡುಕೊಳ್ಳಲು ಆಗಲ್ಲ. ಪಾಪದ ಹಣದಿಂದ ಚುನಾವಣೆ ಮಾಡಿದರೆ ಮಂಡ್ಯದ ಜನ ಮರುಳಾಗಲ್ಲ. ದೇವೇಗೌಡರ ಕುಟುಂಬ ಹಾಗೂ ಜಿಲ್ಲೆಯ ಜನತೆಯ ಬಾಂಧವ್ಯಕ್ಕೆ ಧಕ್ಕೆ ತರಲು ಸಾಧ್ಯವಿಲ್ಲವೆಂದು ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದರು.
ಮೈತ್ರಿ ಧರ್ಮ ಪಾಲಿಸಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ನಾವು ಸಹಕರಿಸಲಿದ್ದು, ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದೇವೆ. ಆದರೆ, ನಮಗೆ ಬೆಂಬಲ ನೀಡುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಷಯವೆಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದರು.
ನಿಖಿಲ್ ಸೋಲಿಸಲು ಬಿಜೆಪಿ ಸೇರಿದಂತೆ ಹಲವರು ಒಂದಾಗಿದ್ದಾರೆ. ಈಕ ಮೂಲಕ ಮಂಡ್ಯ ಬಿಜೆಪಿ ಮುಕ್ತವಾಗಿದೆ ಎಂದು ಹೇಳಿದ ಅವರು, ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯವಿರುವ ಎಲ್ಲ ತಂತ್ರವನ್ನೂ ಪ್ರಯೋಗಿಸುತ್ತೇವೆ. ಅದರಲ್ಲಿ ಯಶಸ್ವಿಯೂ ಆಗುತ್ತೇವೆ ಎಂದರು.







