ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕಕ್ಕೆ ಮೂರನೆ ಸ್ಥಾನ
ಬೆಂಗಳೂರು, ಮಾ. 24: ಆದಾಯ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ವಲಯ ದೇಶದಲ್ಲೆ ಮೂರನೆ ಸ್ಥಾನದಲ್ಲಿದೆ ಎಂದು ಐಟಿ ಇಲಾಖೆ ಕರ್ನಾಟಕ ಮತ್ತು ಗೋವಾ ವಿಭಾಗದ ಮಹಾ ನಿರ್ದೇಶಕಬಿ.ಆರ್. ಬಾಲಕೃಷ್ಣನ್ ತಿಳಿಸಿದ್ದಾರೆ.
ಶನಿವಾರ ಐಟಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017-18ನೆ ಆರ್ಥಿಕ ಸಾಲಿನಲ್ಲಿ 1,03,745ಕೋಟಿ ರೂ.ಆದಾಯ ತೆರಿಗೆ ಸಂಗ್ರಹಿಸಲಾಗಿತ್ತು. 2018-19ನೆ ಸಾಲಿನಲ್ಲಿ 1,11,152ಕೋಟಿ ರೂ. ಸಂಗ್ರಹಿಸಿದ್ದು, 7,407 ಕೋಟಿ ರೂ. ಹೆಚ್ಚಳವಾಗಿದೆ ಎಂದರು.
ದೇಶದಲ್ಲಿ ಆದಾಯ ತೆರಿಗೆ ಸಂಗ್ರಹಣೆಯಲ್ಲಿ ಮುಂಬೈ ಮತ್ತು ದಿಲ್ಲಿ ನಂತರ ಕರ್ನಾಟಕ 3ನೆ ಸ್ಥಾನದಲ್ಲಿದೆ ಎಂದ ಅವರು, ಕೆಲವರು ಇದುವರೆಗೂ ಆದಾಯ ತೆರಿಗೆ ಪಾವತಿಸಿಲ್ಲ. ಮಾ.31ರ ವರೆಗೂ ಕಾಲಾವಕಾಶವಿದ್ದು, ಅಷ್ಟರೊಳಗೆ ಆದಾಯ ತೆರಿಗೆ ಪಾವತಿಸಬಹುದು ಎಂದು ಸೂಚಿಸಿದರು.
ತೆರಿಗೆ ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಬೆಂಗಳೂರು ಮೂಲದ ಉದ್ಯಮಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅಲ್ಲದೆ, ತುಮಕೂರು ಮೂಲದ ಉದ್ಯಮಿಯನ್ನು ಬಂಧಿಸಲಾಗಿತ್ತು. ಈ ಇಬ್ಬರಿಗೆ ಪ್ರತ್ಯೇಕ ಪ್ರಕರಣಗಳ ವಿಚಾರಣೆಯಲ್ಲಿ ನ್ಯಾಯಾಲಯವು ಆರು ತಿಂಗಳ ಜೈಲು ಶೀಕ್ಷೆ ವಿಧಿಸಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.







