ಪಕ್ಷ ವಿರೋಧಿ ಚಟುವಟಿಕೆ: ಆರು ಯುವ ಕಾಂಗ್ರೆಸ್ ಮುಖಂಡರ ಉಚ್ಚಾಟನೆ

ಮಂಡ್ಯ, ಮಾ.24: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಯುವ ಕಾಂಗ್ರೆಸ್‍ನ 6 ಮಂದಿಯನ್ನು ರಾಜ್ಯ ಕಾಂಗ್ರೆಸ್ ಯುವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೀತಾರಾಜಣ್ಣ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಅರವಿಂದ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್, ನಾಗಮಂಗಲ ತಾಲೂಕು ಅಧ್ಯಕ್ಷ ಶರತ್ ರಾಮಣ್ಣ, ಮಂಡ್ಯ ತಾಲೂಕು ಅಧ್ಯಕ್ಷ ವಿಜಯ್ ಕುಮಾರ್, ಮಳವಳ್ಳಿ ತಾಲೂಕು ಉಪಾಧ್ಯಕ್ಷ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 2 ದಿನಗಳ ಹಿಂದೆ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿದ್ದ ಹನಕೆರೆ ಶಶಿಕುಮಾರ್ ಅವರನ್ನು ವಕ್ತಾರ ಹುದ್ದೆ ಸ್ಥಾನದಿಂದ ತೆರವುಗೊಳಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ಯುವ ಕಾಂಗ್ರೆಸ್ ಮುಖಂಡರು ಶನಿವಾರ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದರು.





