ಪುನರಾಗಮನ ಪಂದ್ಯದಲ್ಲಿ ವಾರ್ನರ್ ಮಿಂಚಿನ ಅರ್ಧಶತಕ

ಕೋಲ್ಕತಾ,ಮಾ.24: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ಶತಕಾರ್ಧ ದಾಖಲಿಸಿದ ಸನ್‌ರೈಸರ್ಸ್ ಹೈದರಾಬಾದ್ ದಾಂಡಿಗ ಡೇವಿಡ್ ವಾರ್ನರ್ ಭರ್ಜರಿ ಪುನರಾಗಮನ ಮಾಡಿದ್ದಾರೆ.
ಕೇವಲ 31 ಎಸೆತಗಳಲ್ಲಿ ಐಪಿಎಲ್‌ನಲ್ಲಿ 37ನೇ ಅರ್ಧಶತಕ ಪೂರೈಸಿದ ವಾರ್ನರ್ ಹೈದರಾಬಾದ್‌ನ ಉತ್ತಮ ಮೊತ್ತಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಆಸ್ಟ್ರೇಲಿಯ ದಾಂಡಿಗ ವಾರ್ನರ್ 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಅರ್ಧಶತಕ ಸಿಡಿಸಿದ ಮೊದಲಿಗ ಎನಿಸಿಕೊಂಡಿದ್ದಾರೆ. ಚೆನ್ನೈ ಹಾಗೂ ಬೆಂಗಳೂರು ನಡುವೆ ಚೆನ್ನೈನಲ್ಲಿ ಶನಿವಾರ ನಡೆದ ಉದ್ಘಾಟನಾ ಪಂದ್ಯ ಕನಿಷ್ಠ ಮೊತ್ತದ ಪೈಪೋಟಿಯಾಗಿತ್ತು.
32ರ ಹರೆಯದ ವಾರ್ನರ್ ಐಪಿಎಲ್‌ನಲ್ಲಿ 40ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದರು. 53 ಎಸೆತಗಳಲ್ಲಿ 85 ರನ್ ಗಳಿಸಿ ರಸೆಲ್‌ಗೆ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗನ ಆಕರ್ಷಕ ಇನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ ಆರು ಸಿಕ್ಸರ್‌ಗಳಿದ್ದವು. ವಾರ್ನರ್ ಹಾಗೂ ಸಹ ಆಟಗಾರ ಸ್ಟೀವ್ ಸ್ಮಿತ್ ಕಳೆದ ವರ್ಷದ ದಕ್ಷಿಣ ಆಫ್ರಿಕದಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಕ್ರಿಕೆಟ್ ಆಸ್ಟ್ರೇಲಿಯದಿಂದ ಒಂದು ವರ್ಷ ನಿಷೇಧ ಎದುರಿಸುತ್ತಿದ್ದಾರೆ. ಅವರ ನಿಷೇಧದ ಅವಧಿ ಈ ತಿಂಗಳಾಂತ್ಯಕ್ಕೆ ಕೊನೆಯಾಗಲಿದೆ. ಕಳೆದ ವರ್ಷ ನಿಷೇಧಕ್ಕೆ ಒಳಗಾದ ಕಾರಣ ವಾರ್ನರ್ ಹಾಗೂ ಸ್ಮಿತ್ ಐಪಿಎಲ್ ಟೂರ್ನಿಯಲ್ಲಿ ಆಡಿರಲಿಲ್ಲ.
2016ರಲ್ಲಿ ಸನ್‌ರೈಸರ್ಸ್ ತಂಡ ವಾರ್ನರ್ ನಾಯಕತ್ವದಲ್ಲಿ ಐಪಿಎಲ್ ಪ್ರಶಸ್ತಿ ಜಯಿಸಿತ್ತು. ಆಗ ಅವರು 14 ಪಂದ್ಯಗಳಲ್ಲಿ 641 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದರು. 2018ರ ಆವೃತ್ತಿಯ ಐಪಿಎಲ್‌ನಲ್ಲಿ ವಾರ್ನರ್ ಬದಲಿಗೆ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೈದರಾಬಾದ್ ತಂಡದ ಚುಕ್ಕಾಣಿ ಹಿಡಿದಿದ್ದರು.







