ಪ್ರೊ ಕಬಡ್ಡಿ ಲೀಗ್: 29 ಆಟಗಾರರನ್ನು ಉಳಿಸಿಕೊಂಡ ಫ್ರಾಂಚೈಸಿಗಳು

ಮುಂಬೈ, ಮಾ.25: ‘ಎಲೈಟ್ ರಿಟೇನಡ್ ಪ್ಲೇಯರ್ಸ್’ ವರ್ಗದಡಿ ಆಯಾ ಪ್ರೊ ಕಬಡ್ಡಿ ಲೀಗ್ ಫ್ರಾಂಚೈಸಿಗಳು ಒಟ್ಟು 29 ಆಟಗಾರರನ್ನು ಉಳಿಸಿಕೊಂಡಿವೆ ಎಂದು ಸೋಮವಾರ ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.
ಜುಲೈ 19ರಂದು ಆರಂಭವಾಗುವ ಈ ಟೂರ್ನಿಗೆ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಕಳೆದ ಆವೃತ್ತಿಯ 21ರಿಂದ 29ಕ್ಕೆ ಏರಿಕೆಯಾಗಿದೆ.
ತಮ್ಮ ತಂಡಗಳಲ್ಲಿ ಉಳಿಕೆಯಾಗದ ಆಟಗಾರರು ಎ.8 ಹಾಗೂ 9ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲೈಟ್ ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆಯು ಗರಿಷ್ಠ 4ರಿಂದ 6ಕ್ಕೆ ಏರಿಕೆಯಾಗಿದೆ. ‘ಎ’ ಮತ್ತು ‘ಬಿ’ ಯ ಪ್ರತಿ ವರ್ಗಗಳಿಂದ ಗರಿಷ್ಠ ಇಬ್ಬರು ಆಟಗಾರರೊಂದಿಗೆ ಫ್ರಾಂಚೈಸಿಗಳು ಎ,ಬಿ ಅಥವಾ ಸಿ ವರ್ಗದಿಂದ ಗರಿಷ್ಠ 6 ಎಲೈಟ್ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.
ತಮಿಳ್ ತಲೈವಾಸ್ ತಂಡ ಪ್ರಮುಖ ಆಟಗಾರ ಅಜಯ್ ಠಾಕೂರ್ ಅವರನ್ನು ಸತತ ಎರಡನೇ ಬಾರಿ ಮಂಜೀತ್ ಚಿಲ್ಲಾರ್ ಅವರೊಂದಿಗೆ ಉಳಿಸಿಕೊಂಡಿದೆ.
ಅನುಭವಿ ಆಟಗಾರರಾದ ರೋಹಿತ್ ಕುಮಾರ್(ಬೆಂಗಳೂರು ಬುಲ್ಸ್), ಫಝಲ್ ಅಟ್ರಾಚಲಿ (ಯು ಮುಂಬಾ), ಪರ್ದೀಪ್ ನರ್ವಾಲ್ (ಪಾಟ್ನಾ ಪೈರೇಟ್ಸ್), ದೀಪಕ್ ಹೂಡಾ (ಜೈಪುರ ಪಿಂಕ್ ಪ್ಯಾಂಥರ್ಸ್), ಜೋಗಿಂದರ್ ನರ್ವಾಲ್ (ದಬಾಂಗ್ ದಿಲ್ಲಿ) ಮತ್ತು ಮಣಿಂದರ್ ಸಿಂಗ್ (ಬೆಂಗಾಲ್ ವಾರಿಯರ್ಸ್) ಕೂಡ ತಮ್ಮ ತಂಡಗಳಲ್ಲಿ ಉಳಿದುಕೊಂಡಿದ್ದಾರೆ.
ಪವನ್ ಶೆರಾವತ್ (ಬೆಂಗಳೂರು ಬುಲ್ಸ್), ವಿಕಾಸ್ ಖಂಡೋಲಾ (ಹರ್ಯಾಣ ಸ್ಟೀಲರ್ಸ್), ಸಚಿನ್ (ಗುಜರಾತ್ ಫಾರ್ಚುನ್‌ಜೈಂಟ್ಸ್), ಸಂದೀಪ್ ಧುಲ್ (ಜೈಪುರ ಪಿಂಕ್ ಪ್ಯಾಂಥರ್ಸ್) ಆಯಾ ತಂಡಗಳು ಉಳಿಸಿಕೊಂಡ ಆಟಗಾರರಲ್ಲಿ ಸೇರಿದ್ದಾರೆ.







