ಕಳವು, ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಗುಂಡಿಕ್ಕಿ ಬಂಧನ

ಬೆಂಗಳೂರು, ಮಾ.27: ಕಳವು, ಹಲ್ಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಇಲ್ಲಿನ ಸೋಲದೇವನಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರ್ಗಿ ಮೂಲದ ಲಕ್ಷ್ಮೀದೇವಿ ನಗರ ನಿವಾಸಿ ದೇವರಾಜು(25), ಶೆಟ್ಟಹಳ್ಳಿ ನಿವಾಸಿ ಚಂದ್ರಶೇಖರ್(23) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ ಇಲ್ಲಿನ ತರಬನಹಳ್ಳಿ ಮಂಜು ಮದ್ಯದಂಗಡಿ ಸಮೀಪ ಮೂವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಗಮನಿಸಿದ ಗಸ್ತು ಪೊಲೀಸರು, ಅವರನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದರು.
ಈ ವೇಳೆ ಆರೋಪಿಗಳಾದ ದೇವರಾಜ, ಚಂದ್ರಶೇಖರ್ ಹಾಗೂ ಲಗ್ಗೆರೆ ನಿವಾಸಿ ಮಂಜೇಗೌಡ ಎಂಬುವರು ತಾವು ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಬಗ್ಗೆ ಬಾಯಿಬಿಟ್ಟಿದ್ದಾರೆ. ಬಳಿಕ, ಬುಧವಾರ ಮುಂಜಾನೆ, ಆರೋಪಿಗಳನ್ನು ಮಾರಕಾಸ್ತ್ರ ಬಚ್ಚಿಟ್ಟಿರುವ ಪ್ರದೇಶಕ್ಕೆ ಕರೆದುಕೊಂಡು ತನಿಖಾಧಿಕಾರಿಗಳು ಹೋಗಿದ್ದರು.
ಈ ಸಂದರ್ಭದಲ್ಲಿ, ಆರೋಪಿ ದೇವರಾಜ್, ಏಕಾಏಕಿ ಪಿಎಸ್ಸೈ ವಂಸತ್ ಕುಮಾರ್ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾನೆ. ಜೊತೆಗೆ ಮತ್ತೊಬ್ಬ ಆರೋಪಿ ಚಂದ್ರಶೇಖರ್ ಸಹ ಮುಖ್ಯಪೇದೆ ಶಿವಾಜಿರಾವ್ ಎಂಬುವರ ಮೇಲೆ ಹಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್ ವೆಂಕಟೇಗೌಡ ಅವರು ಆರೋಪಿಗಳಿಗೆ ಶರಣಾಗುವಂತೆ ಸೂಚನೆ ನೀಡಿ, ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.
ಆದರೂ, ಆರೋಪಿಗಳು ಪೊಲೀಸರ ಮೇಲಿನ ಹಲ್ಲೆ ಮುಂದುವರಿಸಿ ಪರಾರಿಯಾಗಲು ಯತ್ನಿಸಿದಾಗ ವೆಂಕಟೇಗೌಡ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡುಗಳಲ್ಲಿ ಒಂದು ದೇವರಾಜ್ ಬಲಗಾಲಿಗೆ ಹಾಗೂ ಚಂದ್ರಶೇಖರ್‌ನ ಎಡಗಾಲಿಗೆ ತಾಗಿ ಗಾಯಗೊಂಡು ಕುಸಿದುಬಿದ್ದಿದ್ದಾರೆ. ಬಳಿಕ, ಆರೋಪಿಗಳನ್ನು ವಶಕ್ಕೆ ಪಡೆದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಗಾಯಗೊಂಡ ಪೊಲೀಸರಿಗೆ ಸಹ ಸ್ಥಳೀಯ ಆಸ್ಪತ್ರೆಯಲ್ಲಿ ಚಕಿತ್ಸೆ ನೀಡಲಾಗುತ್ತಿದ್ದು, ಬಂಧಿತರ ವಿರುದ್ಧ ಎಂಟಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿವೆ.