ಮೂಡಿಗೆರೆ: ಅತಿವೃಷ್ಟಿ ನಷ್ಟ ಪರಿಹಾರ ನೀಡದಿದ್ದರೆ ಚುನಾವಣೆ ಬಹಿಷ್ಕಾರ- ವಿವಿಧ ಪಕ್ಷಗಳ ಮುಖಂಡರ ಎಚ್ಚರಿಕೆ

ಮೂಡಿಗೆರೆ, ಮಾ.27: ತಾಲೂಕಿನ ಊರುಬಗೆ, ತ್ರಿಪುರ ಮತ್ತು ಹಂತೂರು ಸೇರಿದಂತೆ ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಉಂಟಾದ ನಷ್ಟಕ್ಕೆ ಒಂದು ವಾರದಲ್ಲಿ ಜಿಲ್ಲಾಡಳಿತ ಪರಿಹಾರ ಮಂಜೂರು ಮಾಡದಿದ್ದರೆ ಮೂರು ಗ್ರಾಪಂ ವ್ಯಾಪ್ತಿಯ 32 ಹಳ್ಳಿಗಳಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ವಿವಿಧ ಪಕ್ಷಗಳ ಮುಖಂಡರು ಬುಧವಾರ ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಸಿಪಿಐ ಮುಖಂಡ ಬಿ.ಕೆ.ಲಕ್ಷಣ್ ಕುಮಾರ್ ಮಾತನಾಡಿ, ತಾಲೂಕಿನ ಊರುಬಗೆ, ತ್ರಿಪುರ ಮತ್ತು ಹಂತೂರು ಸೇರಿದಂತೆ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ 2537 ಎಕ್ಟೇರ್ ಜಮೀನಿನಲ್ಲಿ ರೈತರು ಬೆಳೆದಿದ್ದ ಕಾಫಿ, ಭತ್ತ, ಕಾಳು ಮೆಣಸು ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ನಾಶವಾಗಿದೆ. ಎಕರೆಗೆ 2 ಮೂಟೆ ಕಾಫಿ ಕೊಯ್ಯಲು ಸಾಧ್ಯವಾಗದೇ ವ್ಯಾಪಕವಾದ ಹಾನಿ ಸಂಭವಿಸಿ ರೈತರು ನಷ್ಟಕ್ಕೆ ತುತ್ತಾಗಿದ್ದಾರೆ. ಸರಕಾರ ಅತಿವೃಷ್ಟಿಯಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡುತ್ತೇವೆಂದು ರೈತರಿಂದ ಅರ್ಜಿ ಸ್ವೀಕರಿಸಿ 8 ತಿಂಗಳು ಕಳೆದರೂ ಪರಿಹಾರವಿನ್ನೂ ನೀಡಿಲ್ಲ. ಪಕ್ಕದ ಹಾಸನ ಜಿಲ್ಲೆಯಲ್ಲಿ ಪರಿಹಾರ ನೀಡಲಾಗಿದ್ದು, ನಮ್ಮ ಜಿಲ್ಲೆಯಲ್ಲಿ ಪರಿಹಾರ ಯಾಕೆ ನೀಡಿಲ್ಲವೆಂದು ಪ್ರಶ್ನಿಸಿದರು.
ದೇವವೃಂದ ರವಿ ಮಾತನಾಡಿ, ಅತಿವೃಷ್ಟಿ ನಷ್ಟ ಪರಿಹಾರದ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ, ಪರಿಹಾರ ಬರುತ್ತದೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಒಂದೆಡೆ ಬೆಳೆ ಕಳೆದುಕೊಂಡು ಮತ್ತೊಂದೆಡೆ ಸಕಾಲದಲ್ಲಿ ಪರಿಹಾರವೂ ಸಿಗದಿದ್ದರಿಂದ ಸುಮಾರು 1200 ಮಂದಿ ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಹಿಂದೆ ಇದ್ದ ಜಿಲ್ಲಾಧಿಕಾರಿ ಬಳಿಗೆ 6 ಬಾರಿ ತೆರಳಿ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಅಧಿಕಾರಿಗಳು ಸರ್ವೆ ನಡೆಸಿದಾಗ ಮಡ್ಡಿಕೆರೆ, ಮೂಲರಹಳ್ಳಿ, ಗುತ್ತಿಹಳ್ಳಿ, ಬೈದವಳ್ಳಿ, ಹಳೆಕೆರೆ ಸೇರಿದಂತೆ ಅನೇಕ ಅತಿವೃಷ್ಟಿ ಪ್ರದೇಶವನ್ನು ಕೈ ಬಿಡಲಾಗಿದೆ. ಹಾಗಾಗಿ ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಕೈಬಿಡಲಾಗಿರುವ ಅತಿವೃಷ್ಟಿ ಪ್ರದೇಶವನ್ನು ಸೇರ್ಪಡೆಗೊಳಿಸಿ ಶೀಘ್ರವಾಗಿ ಅತಿವೃಷ್ಟಿ ನಷ್ಟ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಹಂತೂರು ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ವಿವಿಧ ಪಕ್ಷಗಳ ಮುಖಂಡರಾದ ಎಸ್.ಎ.ವಿಜೇಂದ್ರ, ಡಿ.ಕೆ.ರಮೇಶ್, ಪ್ರಕೃತಿ ರಮೇಶ್, ಪ್ರಸನ್ನ ಗೌಡಗಳ್ಳಿ, ಎಚ್.ಬಿ.ಜಗನ್ನಾಥ, ಡಿ.ಆರ್.ಲಿಂಗೇಗೌಡ, ಡಿ.ಎಸ್.ರಮೇಶ್, ಯಜಮಾನಗೌಡ, ಪಟೇಲ್ ರಮೇಶ್, ನಾಗೇಶ್, ಕೃಷ್ಣೇಗೌಡ, ಎಚ್.ಜಿ.ವೆಂಕಟೇಶ್, ಶ್ರೀಧರ್, ಶಂಕರೇಗೌಡ, ಜಿ.ಸಿ.ಮೋಹನ್, ಮಂಜುನಾಥ್, ರತನ್ ದೇವವೃಂದ, ಕಾರ್ತಿರ್ಕ, ಪುಟ್ಟೇಗೌಡ ಮತ್ತಿತರರಿದ್ದರು.







