ನೂರು 'ಸುಮಲತಾ'ರನ್ನು ಕಣಕ್ಕಿಳಿಸಿದರೂ ಯಾಮಾರಲು ಮಂಡ್ಯ ಜನತೆ ಮುಟ್ಠಾಳರಲ್ಲ: ಸುಮಲತಾ ವಾಗ್ದಾಳಿ
"ಗೆಲ್ಲಲು ಸಾಧ್ಯವೇ ಇಲ್ಲ ಎಂಬುದನ್ನು ಜೆಡಿಎಸ್ ಒಪ್ಪಿಕೊಂಡಿದೆ"

ಮಂಡ್ಯ, ಮಾ.27: ತನ್ನ ವಿರುದ್ಧ ನನ್ನದೇ ಹೆಸರಿನ ಮೂವರನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್ ಗೆಲ್ಲಲು ಸಾಧ್ಯವೇ ಇಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ಲೋಕಸಭೆ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪ್ರತಿಪಾದಿಸಿದ್ದಾರೆ.
ಕುತಂತ್ರ, ಮೋಸದ ರಾಜಕಾರಣದ ಮೂಲಕ ಸದ್ದು ಮಾಡುತ್ತಿದ್ದ ಜೆಡಿಎಸ್ ನೇರ ರಾಜಕಾರಣ ಕೈಬಿಟ್ಟು ಅನ್ಯ ದಾರಿ ಹಿಡಿದಿದೆ. ಮೂರಲ್ಲ ನೂರು ಸುಮಲತಾರನ್ನು ಕಣಕ್ಕಿಳಿಸಿದರೂ ಯಾಮಾರಲು ಮಂಡ್ಯ ಜನರು ಮೌಢ್ಯರಲ್ಲ, ಮುಟ್ಠಾಳರೂ ಅಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಬೂಕನಕೆರೆ, ಐಚನಹಳ್ಳಿ, ಮುಂತಾದ ಕಡೆ ಕಾಂಗ್ರೆಸ್, ಬಿಜೆಪಿ, ರೈತಸಂಘದ ಕಾರ್ಯಕರ್ತರ ಜತೆ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಜನರಿಗೆ ಅಂಬರೀಷ್ ಪತ್ನಿ ಯಾರೆಂಬುದು ಚೆನ್ನಾಗಿ ಅರಿವಿದೆ. ಪ್ರಜ್ಞಾವಂತ ಮತದಾರರು ತಮಗೆ ಬೇಕಾದವರನ್ನೇ ಆರಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ನಿನ್ನೆ ಮೊನ್ನೆ ಹಾವು ಮುಂಗುಸಿಗಳಂತೆ ಕಿತ್ತಾಡುತ್ತಿದ್ದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ನಿಜವಾಗಿ ದುಡಿಯುವ ಜೋಡೆತ್ತುಗಳಂತೆ. ಯಾರು ಜೋಡೆತ್ತು, ಯಾರು ಜೋಡೆತ್ತಲ್ಲ ಎಂಬ ಉತ್ತರವನ್ನು ಎ.18 ರಂದು ಜನರೇ ನೀಡಲಿದ್ದಾರೆ ಎಂದರು.
ಯಶ್ ಮತ್ತು ದರ್ಶನ್ ನನ್ನ ಮಕ್ಕಳು. ಅವರು ಯಾರೇನೇ ಬೆದರಿಕೆ ಹಾಕಿದರೂ ಪ್ರಚಾರ ಸಭೆಗಳಿಗೆ ಬಂದು ಪ್ರಚಾರ ಮಾಡಿ ನನ್ನನ್ನೇ ಬೆಂಬಲಿಸುತ್ತಾರೆ. ನಾನು ಯಾರ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ ಎಂಬುದರ ಅರಿವು ನನಗಿದೆ. ಇಲ್ಲಿರುವ ಜನರು ದುಡ್ಡುಕೊಟ್ಟು ಕರೆತಂದವರಲ್ಲ. ಜಿಲ್ಲೆಯ ಜನರು ಸ್ವಾಭಿಮಾನಿಗಳು, ಏಕಾಂಗಿ ಹೋರಾಟ ನಡೆಸುತ್ತಿರುವ ನನ್ನ ಕೈಬಿಡಲ್ಲ ಎಂದು ಸುಮಲತಾ ವಿಶ್ವಾಸ ವ್ಯಕ್ತಪಡಿಸಿದರು.
ಅದ್ಧೂರಿ ಸ್ವಾಗತ: ಬೂಕನಕೆರೆ ಹೋಬಳಿ ಪ್ರವಾಸವನ್ನು ಐಚನಹಳ್ಳಿಯಿಂದ ಆರಂಭಿಸಿದ ಸುಮಲತಾ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಗ್ರಾಮ ದೇವತೆ ಐಚನಳಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರಿಗೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಹಾರ ಹಾಕಿ ಸಂಭ್ರಮಿಸಿದರು.
ನಂತರ ಬಾಜಾಭಜಂತ್ರಿಯೊಂದಿಗೆ ರೋಡ್ ಶೋ ನಡೆಸಿದ ಸುಮಲತಾ ಅವರಿಗೆ ದಾರಿಯುದ್ದಕ್ಕೂ ಮಹಿಳೆಯರು ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿದರು. ಗ್ರಾಮಸ್ಥರ ಅಭಿಮಾನಕ್ಕೆ ಸುಮಲತಾ ಭಾವುಕರಾಗಿ ಹಸಿರು ಟವಲ್ ಬೀಸುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರ‍್ಯಾಲಿಯಲ್ಲಿ ಅಂಬರೀಷ್ ಪರ ಜೈಕಾರ ಮೊಳಗಿತು.
ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ರೈತ ಮುಖಂಡ ಅಂಗಡಿ ನಾಗರಾಜು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಟಿ.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಕೆ.ಆರ್.ರವೀಂದ್ರಬಾಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಜಯಲಕ್ಷ್ಮಿ, ಬ್ಲಾಕ್ ಎಸ್.ಸಿ ಘಟಕದ ಅಧ್ಯಕ್ಷರಾದ ಶಿವಣ್ಣ, ರಾಜಯ್ಯ, ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರನ ಪುತ್ರ ಪಚ್ಚಿ, ಜಿಪಂ ಮಾಜಿ ಸದಸ್ಯೆ ಸರ್ವಮಂಗಳ, ಬಿಜೆಪಿ ಪಕ್ಷದ ತಾಪಂ ಸದಸ್ಯೆ ಮೀನಾಕ್ಷಿ ಪುಟ್ಟರಾಜು, ಮುಖಂಡರಾದ ಬೋಳೇಗೌಡ, ಮಧುಸೂದನ್, ಅಡಿಕೆ ಸ್ವಾಮಿಗೌಡ ಸೇರಿದಂತೆ ನೂರಾರು ಜನರು ಸುಮಲತಾ ಅಂಬರೀಷ್ ಅವರ ರೋಡ್ ಶೋನಲ್ಲಿ ಭಾಗವಹಿಸಿದ್ದರು.
ಸುಮಲತಾ ಗೆಲುವಿಗೆ ಉರುಳುಸೇವೆ!
ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವಿಗಾಗಿ ಬಿಜೆಪಿ ಕಾರ್ಯಕರ್ತ ಕೃಷ್ಣರಾಜಪೇಟೆ ತಾಲೂಕು ಬೂಕನಕೆರೆಯ ದೇವಾಲಯದಲ್ಲಿ ಉರುಳು ಸೇವೆ ಮಾಡಿದ್ದಾರೆ.
ಬುಧವಾರ ಸುಮಲತಾ ಚುನಾವಣಾ ಪ್ರಚಾರಕ್ಕೆ ಬೂಕನಕೆರೆ ಗ್ರಾಮಕ್ಕೆ ತೆರಳಿದ್ದಾಗ ಗ್ರಾಮದ ಬಿಜೆಪಿ ಕಾರ್ಯಕರ್ತ ಮಧುಕುಮಾರ್ ಎಂಬಾತ ಗೋಗುಲಮ್ಮ ದೇವಾಲಯದಲ್ಲಿ ಉರುಳುಸೇವೆ ಮಾಡಿ ಸುಮಲತಾ ಗೆಲುವಿಗೆ ಪ್ರಾರ್ಥಿಸಿದರು.







