ರಾಜಕೀಯ ಪಕ್ಷಗಳಿಗೆ ತಲೆನೋವಾದ 'ಅಸಮಾಧಾನ': ಬಂಡಾಯ ಶಮನಕ್ಕೆ ನಾಯಕರ ಕಸರತ್ತು
ನಾಮಪತ್ರ ಹಿಂಪಡೆಯಲು ಮಾ.29 ಕೊನೆಯ ದಿನ

ಬೆಂಗಳೂರು, ಮಾ. 27: ಮೊದಲ ಹಂತದ ಲೋಕಸಭಾ ಚುನಾವಣೆ(ಎ.18)ಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಂಡ ಬೆನ್ನಲ್ಲೆ ರಾಜಕೀಯ ಪಕ್ಷಗಳಿಗೆ ಅಸಮಾಧಾನ ತೀವ್ರ ತಲೆನೋವಾಗಿದ್ದು, ಬಂಡಾಯ ಶಮನಕ್ಕೆ ಮುಖಂಡರು ಹರಸಾಹಸ ನಡೆಸುತ್ತಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಬಂಡಾಯದ ಬಿಸಿ. ಈ ಮಧ್ಯೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಬಂಡಾಯದ ಬಾವುಟ ಹಿಡಿದು ಸಿಡಿದು ನಿಂತವರ ಅಸಮಾಧಾನ ದೂರ ಮಾಡಲು ಮೂರು ಪಕ್ಷಗಳ ಮುಖಂಡರು ಕಸರತ್ತು ನಡೆಸಿದ್ದಾರೆ.
ತುಮಕೂರು, ಮಂಡ್ಯ, ಬೆಂಗಳೂರು ದಕ್ಷಿಣ, ಕೋಲಾರ ಹಾಗೂ ಕೊಪ್ಪಳ ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ತೀವ್ರ ಕುತೂಹಲ ಸೃಷ್ಟಿಸಿರುವ ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಸ್ಪರ್ಧಿಸಿದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವುದು ಮೈತ್ರಿ ಪಕ್ಷಗಳ ನಾಯಕರ ನಿದ್ದೆ ಕೆಡಿಸಿದೆ. ನಾಮಪತ್ರ ವಾಪಸ್ ಪಡೆಯಲು ಅಭ್ಯರ್ಥಿಗಳ ಮನವೊಲಿಕೆಗೆ ಮುಖಂಡರು ಪ್ರಯತ್ನ ನಡೆಸಿದರೂ, ಇಬ್ಬರೂ ಮುಖಂಡರ ಕೈಗೆ ಸಿಗುತ್ತಿಲ್ಲ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆ ಜೆಡಿಎಸ್ ಮುಖಂಡರು ‘ಮೈತ್ರಿ ಧರ್ಮ’ ಪಾಲಿಸಬೇಕೆಂದು ಸೂಚಿಸಿದ್ದಾರೆ.
ಪ್ರಚಾರಕ್ಕೆ ತೆರಳಲ್ಲ: ಈ ಮಧ್ಯೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಕೊನೆ ಕ್ಷಣದಲ್ಲಿ ತೇಜಸ್ವಿ ಸೂರ್ಯ ಕಣಕ್ಕಿಳಿಸಿರುವುದು ಟಿಕೆಟ್ ಆಕಾಂಕ್ಷಿ ತೇಜಸ್ವಿನಿ ಅನಂತ ಕುಮಾರ್, ಮಾಜಿ ಸಚಿವ ವಿ.ಸೋಮಣ್ಣ ಸೇರಿ ಹಲವು ಮುಖಂಡರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಲಾರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿಬಿಎಂಪಿ ಕಾಪೋರೇಟರ್ ಮುನಿಸ್ವಾಮಿ ಕಣಕ್ಕಿಳಿಸಿರುವುದು ಜಿಲ್ಲೆಯ ಬಿಜೆಪಿ ಮುಖಂಡರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್ ಆಕಾಂಕ್ಷಿಗಳಾದ ಡಿ.ಎಸ್.ವೀರಯ್ಯ, ಚಿ.ನಾ.ರಾಮು, ಕೆ.ಶಿವರಾಮ್ ಪಕ್ಷದ ವರಿಷ್ಠರ ತೀರ್ಮಾನದ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಚಾರ ಭರಾಟೆಗೆ ಸಿದ್ದತೆ ನಡೆಸಬೇಕಿದ್ದ ಮೂರು ರಾಜಕೀಯ ಪಕ್ಷಗಳ ಮುಖಂಡರು ಪಕ್ಷಗಳಲ್ಲಿನ ಬಂಡಾಯದ ಒಳ ಬೇಗುದಿ ಶಮನಕ್ಕೆ ಹರಸಾಹಸ ಮಾಡಬೇಕಾದ ಅನಿರ್ವಾಯ ಪರಿಸ್ಥಿತಿ ಸೃಷ್ಟಿಸಿದೆ.







