ನೀತಿ ಸಂಹಿತೆ ಉಲ್ಲಂಘನೆ ಆರೋಪ: ಸಿಎಂ, ಸಚಿವ, ಡಿಸಿ ವಿರುದ್ಧ ದೂರು

ಮಂಡ್ಯ, ಮಾ.27: ಲೋಕಸಭಾ ಅಭ್ಯರ್ಥಿಯಾಗಿರುವ ತನ್ನ ಪುತ್ರ ನಿಖಿಲ್ ಗೆಲುವಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ಬಾಮಿ ಜಿಲ್ಲಾಡಳಿತವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿ ಆರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ನಿಖಿಲ್ ಗೆಲುವಿಗಾಗಿ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಇಂಟಲಿಜೆನ್ಸ್ ಪೇದೆಗಳನ್ನು ಮಂಗಳವಾರ ಟ್ರೈನಿಂಗ್ ನೆಪದಲ್ಲಿ ಬೆಂಗಳೂರಿಗೆ ಕರೆಯಿಸಿಕೊಂಡು ಮಗನ ಪರವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಚಲನವಲನಗಳ ಮೇಲೆ ನಿಗಾವಹಿಸಲು ಸೂಚಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಇಡೀ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದರೂ ಮಂಡ್ಯದ ಸಿಬ್ಬಂದಿಗಳನ್ನು ಮಾತ್ರ ಕರೆಸಿ ಮಾತನಾಡಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಹಾಗೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರೂ ಸಿಎಂಗೆ ಸಾಥ್ ನೀಡಿದ್ದು, ಅವರನ್ನು ಬೇರೆಡೆ ವರ್ಗಾಯಿಸುವಂತೆ ರವೀಂದ್ರ ಮನವಿ ಮಾಡಿದ್ದಾರೆ.
ನಿಖಿಲ್ ಗೆಲ್ಲಿಸಿದರೆ ಜಿಲ್ಲೆಗೆ ಹೆಚ್ಚಿನ ಅನುದಾನ ಸಿಗುವುದಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದೂ ರವೀಂದ್ರ ಆರೋಪಿಸಿದ್ದಾರೆ. ಜತೆಗೆ ಚುನಾವಣೆ ಮುಗಿಯುವವರೆಗೂ ಜಿಲ್ಲಾ ಚುನಾವಣಾಧಿಕಾರಿಯನ್ನು ವರ್ಗಾವಣೆ ಮಾಡಲು ಅವರು ಒತ್ತಾಯಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿ ಮತ್ತೊಬ್ಬ ಆರ್‍ಟಿಐ ಕಾರ್ಯಕರ್ತ ಬಿ.ಎಸ್.ಗೌಡ ಎಂಬುವರೂ ಚುನಾವಣಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.







