ನೋಟಾ ಒತ್ತುವ ಮೂಲಕ : ಕ್ರೈಸ್ತ ಸಮುದಾಯ ಎಚ್ಚರಿಕೆ
ಬೆಂಗಳೂರು, ಮಾ.27: ರಾಜಕೀಯ ಪಕ್ಷಗಳು ಕ್ರೈಸ್ತ ಸಮುದಾಯದ ಯಾವೊಬ್ಬರಿಗೂ ಲೋಕಸಭಾ ಚುನಾವಣೆಯಲ್ಲಿ ಅವಕಾಶ ನೀಡದೇ ಇರುವುದನ್ನು ಖಂಡಿಸುತ್ತಿದ್ದು, ನೋಟಾ ಒತ್ತುವ ಮೂಲಕ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಕರ್ನಾಟಕ ಕ್ರೈಸ್ತ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಹ್ಯಾರಿ ಡಿಸೋಜಾ, ರಾಜ್ಯದಲ್ಲಿ ಕ್ರೈಸ್ತರು 35 ಲಕ್ಷಕ್ಕೂ ಹೆಚ್ಚು ಜನರು ಇದ್ದಾರೆ. ನಮ್ಮ ಸಮುದಾಯದ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಚುನಾವಣೆಗಳಲ್ಲಿ ಬೆಂಗಳೂರು, ಮಂಗಳೂರು, ಕಾರಾವಾರ ಬೀದರ್‌ಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಇಲ್ಲದಿದ್ದರೆ ನೋಟಾ ಒತ್ತುವ ಮೂಲಕ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎ.17ರಿಂದ ಐದು ದಿನಗಳವರೆಗೆ ಕ್ರೈಸ್ತರಿಗೆ ಪವಿತ್ರವಾದ ಹಬ್ಬವಾಗಿರುವುದರಿಂದ ಕ್ರೈಸ್ತ ಸಂಸ್ಥೆಗಳಿಂದ ಮತಗಟ್ಟೆಯನ್ನು ಸ್ಥಳಾಂತರಿಸುವಂತೆ, ಕ್ರೈಸ್ತ ಧರ್ಮದ ಚುನಾವಣಾ ಅಧಿಕಾರಿ ಹಾಗೂ ನೌಕರರನ್ನು ಚುನಾವಣಾ ಕರ್ತವ್ಯದಿಂದ ಕೈಬಿಡುವಂತೆ ಚುನಾವಣಾಧಿಕಾರಿಗೆ ಪತ್ರ ಬರೆಯಲಾಗಿದ್ದು, ಚುನಾವಣಾ ಆಯೋಗ ಸಮುದಾಯದ ಮನವಿಯನ್ನು ಪರಿಗಣಿಸಿ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.





