ಬೋಯಿಂಗ್ 737 ಮ್ಯಾಕ್ಸ್ ವಿಮಾನ ತುರ್ತು ಭೂಸ್ಪರ್ಶ

ವಾಶಿಂಗ್ಟನ್, ಮಾ. 27: ಅಮೆರಿಕದ ಸೌತ್‌ವೆಸ್ಟ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 737 ಮ್ಯಾಕ್ಸ್ ವಿಮಾನವೊಂದು ಮಂಗಳವಾರ ಇಂಜಿನ್ ಸಮಸ್ಯೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಮೆರಿಕದ ಫೆಡರಲ್ ವಾಯುಯಾನ ಸಂಸ್ಥೆ ತಿಳಿಸಿದೆ.
ವಿಮಾನವನ್ನು ಫ್ಲೋರಿಡದಿಂದ ಕ್ಯಾಲಿಫೋರ್ನಿಯಕ್ಕೆ ಸಾಗಿಸುತ್ತಿರುವಾಗ ಈ ಘಟನೆ ಸಂಭವಿಸಿದೆ.
‘‘ವಿಮಾನವು ಹಿಂದಿರುಗಿ ಓರ್ಲಾಂಡೊದಲ್ಲಿ ಸುರಕ್ಷಿತವಾಗಿ ಇಳಿಯಿತು’’ ಎಂದು ಹೇಳಿಕೆಯೊಂದರಲ್ಲಿ ಸಂಸ್ಥೆ ಹೇಳಿದೆ.
ವಿಮಾನವನ್ನು ನಿಲುಗಡೆಗಾಗಿ ಕ್ಯಾಲಿಫೋರ್ನಿಯದ ವಿಕ್ಟರ್‌ವಿಲ್‌ಗೆ ಸಾಗಿಸಲಾಗುತ್ತಿತ್ತು ಹಾಗೂ ಅದರಲ್ಲಿ ಯಾರೂ ಪ್ರಯಾಣಿಕರು ಇರಲಿಲ್ಲ ಎಂದು ಹೇಳಿಕೆ ತಿಳಿಸಿದೆ.
‘‘ಘಟನೆಯ ಬಗ್ಗೆ ಫೆಡರಲ್ ವಾಯುಯಾನ ಸಂಸ್ಥೆ ತನಿಖೆ ನಡೆಸುತ್ತಿದೆ’’ ಎಂದು ಅದು ಹೇಳಿದೆ.
ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನ ಪತನದ ಬಳಿಕ, ಮಾರ್ಚ್ 13ರಂದು ಅಮೆರಿಕವು ತನ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಸೇವೆಯಿಂದ ಹೊರಗಿಟ್ಟಿದೆ. ಆದರೆ, ವಿಮಾನವನ್ನು ಒಂದು ವಿಮಾನ ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಸಾಗಿಸುವುದನ್ನು ಮುಂದುವರಿಸಲಾಗಿದೆ.
ಹಾರಾಟದ ಸ್ವಲ್ಪವೇ ಹೊತ್ತಿನ ಬಳಿಕ ವಿಮಾನದ ಇಂಜಿನ್‌ನಲ್ಲಿ ಸಮಸ್ಯೆ ತಲೆದೋರಿತು ಎಂದು ವಿಮಾನಯಾನ ಕಂಪೆನಿ ‘ಸೌತ್‌ವೆಸ್ಟ್’ ಹೇಳಿದೆ.







